ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ಪಟ್ಟಿಯ ಸುಧಾರಣೆಗಾಗಿ ಎಸ್ಐಆರ್ ಪ್ರಕ್ರಿಯೆ ಚಾಲನೆ ಪಡೆಯುತ್ತಿದೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮತದಾರರು ತಮ್ಮ ಹೆಸರನ್ನು ಬಿಎಲ್ಒ ಆ್ಯಪ್ನಲ್ಲಿ ಮ್ಯಾಪಿಂಗ್ ಮಾಡಿಸಿಕೊಳ್ಳುವಂತೆ ನೋಡಲ್ ಅಧಿಕಾರಿ ಡಾ. ಸಿದ್ಧು ಹುಲ್ಲೋಳ್ಳಿ ಮನವಿ ಮಾಡಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ ದಕ್ಷಿಣ ಮತಕ್ಷೇತ್ರದ ನೋಡಲ್ ಅಧಿಕಾರಿ ಡಾ. ಸಿದ್ಧು ಹುಲ್ಲೋಳ್ಳಿ ಅವರು ಮಾಧ್ಯಮಗೋಷ್ಠಿ ನಡೆಸಿ, ಚುನಾವಣಾ ಆಯೋಗದ ಹೊಸ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ಪ್ರಜೆಗಳು ಮಾತ್ರ ಮತದಾನದ ಹಕ್ಕನ್ನು ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿ 20 ವರ್ಷಕ್ಕೊಮ್ಮೆ ಎಸ್ಐಆರ್ ಸರ್ವೆಯನ್ನು ನಡೆಸಲಾಗುತ್ತದೆ. ಈ ಪ್ರಕ್ರಿಯೆಯ ಭಾಗವಾಗಿ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ತಮ್ಮ ವ್ಯಾಪ್ತಿಯ ಬಿಎಲ್ಒಗಳನ್ನು ಭೇಟಿಯಾಗಿ ಹೆಸರನ್ನು ಮ್ಯಾಪಿಂಗ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ವಿಶೇಷವಾಗಿ 2002ರ ನಂತರ ಪಟ್ಟಿಗೆ ಸೇರಿದವರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ.
ಮುಂದಿನ ತಿಂಗಳಿಂದ ಈ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗುವ ಸಾಧ್ಯತೆಯಿದ್ದು, ಮತದಾರರು ತಮ್ಮ ಮತಗಟ್ಟೆ ಅಧಿಕಾರಿಗಳ ಬಳಿ ಹೋಗಿ ಬಿಎಲ್ಒ ಆ್ಯಪ್ ಮೂಲಕ ‘ಮ್ಯಾಪ್’, ‘ಪ್ರೋಜೆನಿ’ ಮತ್ತು ‘ಸೆಲ್ಫ್ ಪ್ರೋಜೆನಿ’ ವಿವರಗಳನ್ನು ಅಪ್ಡೇಟ್ ಮಾಡಿಸಿಕೊಳ್ಳಬೇಕು. ಈಗಾಗಲೇ 2002ಕ್ಕೂ ಮೊದಲು ಪಟ್ಟಿಯಲ್ಲಿದ್ದು ಎಸ್ಐಆರ್ ಪ್ರಕ್ರಿಯೆ ಪೂರೈಸಿದವರು ನೇರವಾಗಿ ಮ್ಯಾಪಿಂಗ್ಗೆ ಒಳಪಡಬಹುದು. ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ, ತಮ್ಮ ಮತದಾನದ ಹಕ್ಕನ್ನು ಭದ್ರಪಡಿಸಿಕೊಳ್ಳಲು ಈ ತಾಂತ್ರಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
