ಆಲಿಕಲ್ಲು ಮಳೆ ಹೊಡೆತ: ಕೋಟ್ಯಂತರ ನಷ್ಟ, ರೈತರು ಆತಂಕದಲ್ಲಿ!
ಬಿಸಿಲು ನಾಡು ವಿಜಯಪುರದಲ್ಲಿ ಪ್ರಕೃತಿ ತನ್ನ ಅಬ್ಬರವನ್ನು ತೋರಿಸಿದೆ. ಕಳೆದ ಎರಡು ದಿನಗಳಿಂದ ಸಂಜೆ ವೇಳೆಯಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆ, ಜನರಿಗೆ ತಂಪು ನೀಡಿದರೂ ರೈತರ ಪಾಲಿಗೆ ಭಾರೀ ಆಘಾತ ತಂದಿದೆ. ವಿಶೇಷವಾಗಿ ಒಣದ್ರಾಕ್ಷಿ ತಯಾರಿಸಲು ಹಾಕಿದ್ದ ಡ್ರೈಯಿಂಗ್ ಟೆಂಟ್ಗಳು ಹಾನಿಗೊಳಗಾಗಿ, ಸುಮಾರು 3 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಕೈಗೆ ಬಂದ ಬೆಳೆ ಕಣ್ಣೆದುರೇ ಹಾಳಾಗುತ್ತಿದ್ದಂತೆ ರೈತರು ಕಂಗಾಲಾಗಿದ್ದಾರೆ. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ…
ವಿಜಯಪುರ ಜಿಲ್ಲೆಯ ತಿಕೋಟಾ, ಮುದ್ದೇಬಿಹಾಳ, ನಿಡಗುಂದಿ, ಬಸವನಬಾಗೇವಾಡಿ, ಕೊಲ್ಹಾರ ಹಾಗೂ ಮುಳವಾಡ ಭಾಗಗಳಲ್ಲಿ ಭಾರಿ ಗಾಳಿ ಸಹಿತ ಮಳೆ ಸುರಿದಿದೆ. ಈ ವೇಳೆ ಸುರಿದ ಆಲಿಕಲ್ಲು ಮಳೆಯ ತೀವ್ರತೆ ಎಷ್ಟಿತ್ತೆಂದರೆ, ರಸ್ತೆಗಳೆಲ್ಲವೂ ಬಿಳಿ ಹಿಮದಂತೆ ಕಾಣುವಷ್ಟು ಆಲಿಕಲ್ಲುಗಳಿಂದ ಆವರಿಸಿಕೊಂಡವು.
ಒಂದೆಡೆ ಈ ದೃಶ್ಯವನ್ನು ಕಂಡು ಜನರು ಆಲಿಕಲ್ಲುಗಳನ್ನು ಸಂಗ್ರಹಿಸಿ ಸಂಭ್ರಮಿಸಿದರೆ, ಮತ್ತೊಂದೆಡೆ ರೈತರು ತಮ್ಮ ಬೆಳೆ ಹಾನಿಯನ್ನು ಕಂಡು ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಳು ಮಾಗಿದ ಹಂತದಲ್ಲೇ ಆಲಿಕಲ್ಲು ಮಳೆಗೆ ಸಿಲುಕಿ ನೆಲಕಚ್ಚಿವೆ. ತಿಂಗಳ ತೊಡಕು, ಸಾಲ, ಶ್ರಮ ಎಲ್ಲವೂ ಒಂದೇ ಕ್ಷಣದಲ್ಲಿ ನೀರಸವಾಗಿದೆ. ಬೆಳೆ ಕೈಗೆ ಬರುತ್ತದೆ ಎಂದು ನಿರೀಕ್ಷಿಸಿದ್ದ ರೈತರಿಗೆ ಈ ಮಳೆ ಭಾರೀ ಹೊಡೆತ ನೀಡಿದೆ. ಇನ್ನೂ ತಿಕೋಟಾ ತಾಲ್ಲೂಕಿನ ಇಟ್ಟಂಗಿಹಾಳ ದೊಡ್ಡಿಯಲ್ಲಿ ಅಬ್ದುಲ್ ರಶೀದ್ ಇನಾಮದಾರ ಎಂಬವರು ಒಣದ್ರಾಕ್ಷಿ ತಯಾರಿಸಲು ಆಧುನಿಕ ಡ್ರೈಯಿಂಗ್ ಟೆಂಟ್ ನಿರ್ಮಿಸಿದ್ದರು. ಈ ಟೆಂಟ್ನಲ್ಲಿ 3 ಟನ್ ಗಿಂತಲೂ ಹೆಚ್ಚು ದ್ರಾಕ್ಷಿ ಒಣಗಲು ಇಟ್ಟಿದ್ದು, ಅವರ ಸ್ವಂತ ಮೂರು ಎಕರೆ ಬೆಳೆ ಸಹ ಇದರಲ್ಲಿ ಸೇರಿತ್ತು.
ಅಷ್ಟೇ ಅಲ್ಲದೆ, ಇಟ್ಟಂಗಿಹಾಳದ ಹಲವಾರು ರೈತರು ತಮ್ಮ ದ್ರಾಕ್ಷಿಯನ್ನು ಇದೇ ಟೆಂಟ್ನಲ್ಲಿ ಒಣಗಿಸಲು ಇಟ್ಟಿದ್ದರು. ಆದರೆ ಅಕಾಲಿಕ ಮಳೆಗೆ ಟೆಂಟ್ ಸಂಪೂರ್ಣ ಹಾನಿಗೊಳಗಾಗಿ, ಒಳಗಿದ್ದ ದ್ರಾಕ್ಷಿ ಸಂಪೂರ್ಣವಾಗಿ ಹಾಳಾಗಿದೆ.
ಇನ್ನೂ ಈ ಅಕಾಲಿಕ ಆಲಿಕಲ್ಲು ಮಳೆ ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ ರೈತರು ಈಗ ಸಾಲದ ಭಾರದಲ್ಲಿ ಕುಸಿಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಸರ್ಕಾರ ತಕ್ಷಣವೇ ಹಾನಿಯನ್ನು ಪರಿಶೀಲಿಸಿ ಪರಿಹಾರ ಘೋಷಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ರೈತರ ಆರ್ಥಿಕ ಸ್ಥಿತಿ ಇನ್ನಷ್ಟು ದುರ್ಬಲವಾಗುವ ಸಾಧ್ಯತೆ ಇದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಒಟ್ಟಾರೆ ಅಕಾಲಿಕ ಮಳೆಯಿಂದ ಒಣದ್ರಾಕ್ಷಿ ಸೇರಿದಂತೆ ಬೆಳೆಗಳು ಹಾಳಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣ ಪರಿಹಾರ ನೀಡಬೇಕೆಂದು ರೈತರ ಒತ್ತಡ ಹೆಚ್ಚಾಗಿದೆ. ವರುಣನ ವಿಕೃತಿ: ರೈತರ ಬೆಳೆ ಕಣ್ಣೆದುರೇ ನಾಶವಾಗಿ ಆಲಿಕಲ್ಲು ಅಬ್ಬರಕ್ಕೆ ಒಣದ್ರಾಕ್ಷಿ ಕನಸು ಕುಸಿತವಾಗಿದೆ.
