ಸಿಂದಗಿ ಬಳಿ ರಣಭೀಕರ ರಸ್ತೆ ಅಪಘಾತ
ಬೆಂಕಿಯ ಕೆನ್ನಾಲಿಗೆಗೆ ಬೈಕ್ ಸವಾರ ಬಲಿ
ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು
ಕನ್ನೊಳ್ಳಿ ಟೋಲ್‌ಗೇಟ್ ಬಳಿ ಘೋರ ದುರಂತ
ವಿಜಯಪುರ ಜಿಲ್ಲೆಯ ಸಿಂದಗಿ ಬಳಿ ಇಂದು ಮೈ ಜುಂ ಎನ್ನುವಂತಹ ಭೀಕರ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಮತ್ತು ಬೈಕ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದಾಗಿ ಬೈಕ್ ಸವಾರ ಸ್ಥಳದಲ್ಲೇ ಸಜೀವ ದಹನವಾಗಿದ್ದು, ಇಡೀ ಬಸ್ ಅಗ್ನಿಗಾಹುತಿಯಾಗಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಬಳಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ನಿವಾಸಿ ಅಭಿಷೇಕ್ ಸಾಯಬಾಗೌಡ ನಾಗರಾಳ (22) ಎಂಬುವವರೇ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾದ ದುರ್ದೈವಿ. ಡಿಕ್ಕಿಯ ರಭಸಕ್ಕೆ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದರಿಂದ ಬೈಕ್ ಸವಾರನಿಗೆ ಚೇತರಿಸಿಕೊಳ್ಳಲು ಕಾಲಾವಕಾಶವೇ ಸಿಗಲಿಲ್ಲ.
ಘಟನೆಯ ತೀವ್ರತೆಗೆ ಇಡೀ ಬಸ್ ಕ್ಷಣಾರ್ಧದಲ್ಲಿ ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತ್ತು. ಅದೃಷ್ಟವಶಾತ್, ಬೆಂಕಿ ಬಸ್‌ಗೆ ಆವರಿಸುವ ಮೊದಲೇ ಚಾಲಕನ ಸಮಯಪ್ರಜ್ಞೆ ಹಾಗೂ ಪ್ರಯಾಣಿಕರ ತುರ್ತು ನಿರ್ಗಮನದಿಂದಾಗಿ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಂದಗಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
