ಚಿಕ್ಕೋಡಿ: ನಿಪ್ಪಾಣಿ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಜೊಲ್ಲೆ ಗ್ರುಪ್ ವತಿಯಿಂದ ಆಯೋಜಿಸಲಾದ ಭವ್ಯ ಕೃಷಿ ಉತ್ಸವದಲ್ಲಿ ಅಪ್ಪಟ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿದವು. ಅದರಲ್ಲೂ ಯುವಕರ ಶಕ್ತಿ, ಧೈರ್ಯ ಮತ್ತು ಸಾಮರ್ಥ್ಯವನ್ನು ತೋರಿಸುವ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ ಹಾಗೂ ಗುಂಡುಕಲ್ಲು ಎತ್ತುವ ಸ್ಪರ್ಧೆ ಪ್ರೇಕ್ಷಕರಲ್ಲಿ ಭಾರೀ ಉತ್ಸಾಹ ಮೂಡಿಸಿತು.

ಕ್ವಿಂಟಲ್ ತೂಕದ ಭಾರೀ ಕಲ್ಲುಗಳನ್ನು ಯುವ ಪೈಲವಾನರು ಕ್ಷಣಾರ್ಧದಲ್ಲಿ ಹೆಗಲ ಮೇಲೆ ಎತ್ತಿ ತೋರಿಸಿದ ದೃಶ್ಯ ಸಾವಿರಾರು ಜನರನ್ನು ರೋಮಾಂಚಗೊಳಿಸಿತು. ನಿಧಾನವಾಗಿ ನಶಿಸಿ ಹೋಗುತ್ತಿರುವ ಇಂತಹ ಪಾರಂಪರಿಕ ಗ್ರಾಮೀಣ ಕ್ರೀಡೆಗಳನ್ನು ಮತ್ತೆ ಜೀವಂತಗೊಳಿಸುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.
ಗುಂಡುಕಲ್ಲು ಎತ್ತುವ ಸ್ಪರ್ಧೆಯಲ್ಲಿ ಮುದ್ದೇಬಿಹಾಳ ತಾಲೂಕಿನ ಬಿಲ್ಲೂರ ಗ್ರಾಮದ ಶೇಖಪ್ಪ ಬಸಪ್ಪ ಯಲವಾರ ಪ್ರಥಮ ಸ್ಥಾನ ಪಡೆದು ಗಮನ ಸೆಳೆದರು. ಶೆಗುಣಿಸಿಯ ಅಮೃತ ಗೂಡನವರ ದ್ವಿತೀಯ ಸ್ಥಾನ ಹಾಗೂ ಸಂಗಣ್ಣ ಗೂಡನವರ ತೃತೀಯ ಸ್ಥಾನ ಪಡೆದು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.
ಇದೇ ವೇಳೆ ನಡೆದ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಆಸಂಗಿ ಗ್ರಾಮದ ಅಪಜಲ್ ಮುಜಾವರ ಕ್ವಿಂಟಲ ತೂಕದ ಕಲ್ಲು ಎತ್ತಿ ಪ್ರಥಮ ಸ್ಥಾನ ಪಡೆದರು. ಯಲ್ಲಮ್ಮ ಸವದತ್ತಿಯ ಸಬೀಬ ಪೈಲವಾನ ದ್ವಿತೀಯ ಸ್ಥಾನ ಗಳಿಸಿದರೆ, ಬಿಸನಾಳ ಗ್ರಾಮದ ಕಿರಣ ಅರಕೆ ತೃತೀಯ ಸ್ಥಾನ ಪಡೆದು ಪ್ರಶಂಸೆಗೆ ಪಾತ್ರರಾದರು.
ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ, ಕಾರ್ಖಾನೆ ಅಧ್ಯಕ್ಷ ಮಲಗೌಡ ಪಾಟೀಲ, ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸೇರಿದಂತೆ ಕಾರ್ಖಾನೆ ಆಡಳಿತ ಮಂಡಳಿ ಸಂಚಾಲಕರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕೃಷಿ ಉತ್ಸವದ ಅಂಗವಾಗಿ ಆಯೋಜಿಸಲಾದ ಈ ಗ್ರಾಮೀಣ ಕ್ರೀಡೆಗಳು ಯುವಕರಲ್ಲಿ ಉತ್ಸಾಹ ತುಂಬಿದ್ದು, ಗ್ರಾಮೀಣ ಸಂಸ್ಕೃತಿಯ ಉಳಿವಿಗೆ ಸಹಕಾರಿಯಾಗಿವೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು
