ಬೆಳಗಾವಿಯಲ್ಲಿ ಇಂದು ವರುಣ ತನ್ನ ಅಟ್ಟಹಾಸವನ್ನು ತೋರಿದ್ದು, ಅಬ್ಬರಿಸಿ ಬೊಬ್ಬರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಲ್ಹಾಪುರ ವೃತ್ತದಲ್ಲಿ ಮರ ಧರೆಗುರುಳಿದರೇ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಸೋರಿಕೆಯಿಂದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಮಂಗಳವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ಆಲಿಕಲ್ಲಿನ ಹೊಡೆತಕ್ಕೆ ಕುಂದಾನಗರಿ ತತ್ತರಿಸಿದೆ. ಮಳೆಯ ಆರ್ಭಟಕ್ಕೆ ನಗರದ ಒಳಚರಂಡಿಗಳು ಭರ್ತಿಯಾಗಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯಿತು. ಇದರಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸಿದರು. ಕೊಲ್ಹಾಪುರ ವೃತ್ತದ ಬಳಿ ಭಾರಿ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸಾರ್ವಜನಿಕರು ಪರದಾಡುವಂತಾಯಿತು.

ಗಮನಾರ್ಹವೆಂದರೆ, ಇತ್ತೀಚೆಗಷ್ಟೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮೇಲ್ಛಾವಣಿ ಸೋರಲಾರಂಭಿಸಿದೆ. ನವೀಕರಣಗೊಂಡು ಕೇವಲ 2-3 ತಿಂಗಳು ಕಳೆಯುವಷ್ಟರಲ್ಲೇ ಕಚೇರಿಯ ಒಳಗೆ ನೀರು ನುಗ್ಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ನಾಂದಿ ಹಾಡಿದೆ. ಸರ್ಕಾರದ ಅನುದಾನ ಕಳಪೆ ಕಾಮಗಾರಿಯಿಂದಾಗಿ ಮಳೆ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಅಲ್ಲದೇ ಮಳೆ ಗಾಳಿಗೆ ಬೃಹದಾಕಾರದ ಮರವೊಂದು ಕೊಲ್ಹಾಪುರ ವೃತ್ತದ ಬಳಿ ಧರೆಗುರುಳಿ ಬಿದ್ದ ಪರಿಣಾಮ ಕೆಲ ಕಾಲ ಜನಸಂಚಾರ ಸ್ಥಗಿತಗೊಂಡಿತು.

ಬೆಳಗಾವಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯ ಜೀರ್ಣೋದ್ಧಾರಗೊಂಡು ಸುಮಾರು 2-3 ತಿಂಗಳುಗಳು ಕೂಡ ಆಗಿಲ್ಲ. ಅಕಾಲಿಕ ಮಳೆಗೆ ಸೋರುತ್ತಿದ್ದು, ಲಕ್ಷಾಂತರ ರೂಪಾಯಿ ಸಾರ್ವಜನಿಕ ಅನುದಾನ ನೀರಿನಲ್ಲಿ ಪೋಲಾಗಿದೆ. ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಕಂದಾಯ ಸಚಿವರು ಇತ್ತ ಗಮನ ಹರಿಸಬೇಕು. ಗುಣಮಟ್ಟವನ್ನು ಪರಿಶೀಲಿಸಬೇಕು. ಗುತ್ತಿಗೆದಾರನಿಂದ ಕಳಪೆ ಮಟ್ಟದ ಕಾಮಗಾರಿ ನಡೆದಿದೆ ಎಂದು ಮಂಜುನಾಥ ಆರೋಪಿಸಿದರು.
ಒಟ್ಟಾರೆ ಭಾರಿ ಮಳೆಯ ಹಿನ್ನೆಲೆ ಜನಜೀವನ ಅಸ್ತವ್ಯಸ್ತಗೊಂಡಿತು.
