ಬೆಳಗಾವಿಯಲ್ಲಿ ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆ ಒಂದು ಕುಟುಂಬದ ಪಾಲಿಗೆ ಮೃತ್ಯುವಾಗಿ ಬಂದೆರಗಿದೆ. ವ್ಯಾಪಾರಕ್ಕೆಂದು ಹೊರಟಿದ್ದ ದಂಪತಿಗಳು ಮಳೆಯಿಂದ ರಕ್ಷಿಸಿಕೊಳ್ಳಲು ಆಶ್ರಯ ಪಡೆದ ಜಾಗವೇ ಅವರಿಬ್ಬರ ಬದುಕಿನಲ್ಲಿ ಕರಾಳ ಘಟನೆಗೆ ಸಾಕ್ಷಿಯಾಗಿದೆ.
ಬೆಳಗಾವಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಮಳೆರಾಯನ ಆರ್ಭಟಕ್ಕೆ ಗೋಡೆ ಕುಸಿದು 34 ವರ್ಷದ ಪರ್ವಿನ್ ಬೇಪಾರಿ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಂಟಮೂರಿ ಗ್ರಾಮದ ನಿವಾಸಿಯಾದ ಪರ್ವಿನ್ ಮತ್ತು ಆಕೆಯ ಪತಿ ಶರೀಫ್ ಬೇಪಾರಿ ಬೈಕ್ ಮೇಲೆ ಕೋಳಿ ಮಾರಾಟ ಮಾಡಲು ಹೊರಟಿದ್ದರು. ಈ ವೇಳೆ ಏಕಾಏಕಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಶುರುವಾದ ಕಾರಣ, ಮಳೆಯಿಂದ ಬಚಾವಾಗಲು ದಂಪತಿಗಳು ಹಳೆಯ ಪಾಳು ಬಿದ್ದ ಮನೆಯೊಂದರ ಕೆಳಗೆ ನಿಂತಿದ್ದರು. ದುರದೃಷ್ಟವಶಾತ್ ಆ ಮನೆಯ ಗೋಡೆ ಕುಸಿದು ಪತ್ನಿ ಪರ್ವಿನ್ ಸಾವನ್ನಪ್ಪಿದ್ದು, ಪತಿ ಶರೀಫ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡ ಶರೀಫ್ ಅವರಿಗೆ ಸದ್ಯ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನಿರೀಕ್ಷಿತವಾಗಿ ಸಂಭವಿಸಿದ ಈ ಸಾವು ಕುಟುಂಬಸ್ಥರನ್ನು ಕಂಗೆಡಿಸಿದ್ದು, ಸರ್ಕಾರ ಮೃತರ ಕುಟುಂಬಕ್ಕೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು ಎಂದು ಸಂಬಂಧಿಕರು ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ.
