ಬೆಳಗಾವಿ ಜಿಲ್ಲೆಯ ಮಲೆನಾಡು ಭಾಗದ ಹಸಿ ಮೆಣಸಿನಕಾಯಿ ಬೆಳೆಗಾರರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಳ್ಳಿಗಳಿಗೆ ನುಗ್ಗಿ ಅಕ್ರಮವಾಗಿ ‘ಖಾಟಾ’ ಕಟ್ಟುತ್ತಿರುವ ಖಾಸಗಿ ವ್ಯಾಪಾರಸ್ಥರು, ರೈತರಿಗೆ ತೂಕ ಮತ್ತು ಹಣ ಪಾವತಿಯಲ್ಲಿ ವಂಚಿಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಅಕ್ರಮ ದಂಧೆ ತಡೆಯುವಂತೆ ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳಿಗೆ ಬೃಹತ್ ಮನವಿ ಸಲ್ಲಿಸಲಾಯಿತು.

ಬೆಳಗಾವಿ ಜಿಲ್ಲೆಯ ಖಾನಾಪುರ, ಕಿತ್ತೂರು ಮತ್ತು ಬೈಲಹೊಂಗಲ ತಾಲೂಕುಗಳ ರೈತರ ಪ್ರಮುಖ ಆದಾಯದ ಮೂಲವಾಗಿರುವ ಹಸಿ ಮೆಣಸಿನಕಾಯಿ ಬೆಳೆಗೆ ಈಗ ಅಕ್ರಮ ವ್ಯಾಪಾರಸ್ಥರ ಕಣ್ಣು ಬಿದ್ದಿದೆ. ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘದ ಬೀರಪ್ಪ ದೇಶನೂರ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ರೈತ ಮುಖಂಡರು, ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ದಂಧೆಯ ಬಗ್ಗೆ ದೂರು ನೀಡಿದರು. ಹೊರರಾಜ್ಯದ ವ್ಯಾಪಾರಸ್ಥರು ಹಳ್ಳಿಗಳಲ್ಲಿ ಅಕ್ರಮವಾಗಿ ‘ಖಾಟಾ’ (ಖರೀದಿ ಕೇಂದ್ರ) ನಿರ್ಮಿಸಿ, ರೈತರಿಗೆ ಸ್ಪರ್ಧಾತ್ಮಕ ಬೆಲೆ ನೀಡದೆ ತಮಗಿಷ್ಟ ಬಂದ ದರ ನಿಗದಿಪಡಿಸಿ ತೂಕದಲ್ಲಿ ಭಾರೀ ವಂಚನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಅನೇಕ ವ್ಯಾಪಾರಸ್ಥರು ರೈತರಿಗೆ ಕೋಟ್ಯಂತರ ರೂಪಾಯಿ ಹಣ ನೀಡದೆ ತಲೆಮರೆಸಿಕೊಂಡಿರುವ ಘಟನೆಗಳಿದ್ದು, ಈಗಲೂ ಅದೇ ಭೀತಿ ರೈತರನ್ನು ಕಾಡುತ್ತಿದೆ. ಈ ಅಕ್ರಮ ದಂಧೆಯಿಂದ ಸರ್ಕಾರಕ್ಕೂ ತೆರಿಗೆ ನಷ್ಟವಾಗುತ್ತಿದ್ದು, ಕೂಡಲೇ ಹಳ್ಳಿಗಳಲ್ಲಿನ ಖಾಸಗಿ ಖಾಟಾಗಳನ್ನು ತಡೆಹಿಡಿಯಬೇಕು ಎಂದು ಸಂಘಟನೆ ಆಗ್ರಹಿಸಿದೆ. ಎಪಿಎಂಸಿ ಮಾರುಕಟ್ಟೆಗಳಲ್ಲೇ ಪಾರದರ್ಶಕವಾಗಿ ಹರಾಜು ನಡೆಸಿ, ಕೂಡಲೇ ಹಣ ಸಂದಾಯವಾಗುವಂತೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಪ್ರತಿಭಟನೆಯಲ್ಲಿ ಶಿವಪ್ಪ ಸೊಗಲದ, ಮಾರುತಿ ಬಂಡಿವಡ್ಡರ, ಜಗನ್ನಾಥ ಹಂಚಿನಮನಿ ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿದ್ದರು.
