ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ. ಇಂದಿನಿಂದಲೇ ನೀತಿಸಂಹಿತೆ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿದೆ. ನಗರದಾದ್ಯಂತ ರಾರಾಜಿಸುತ್ತಿದ್ದ ರಾಜಕೀಯ ಬ್ಯಾನರ್ ಹಾಗೂ ಪೋಸ್ಟರ್‌ಗಳನ್ನು ಅಧಿಕಾರಿಗಳು ಈಗಾಗಲೇ ತೆರವುಗೊಳಿಸುತ್ತಿದ್ದು, ಬಾಗಲಕೋಟೆಯಲ್ಲಿ ಅಕ್ಷರಶಃ ಚುನಾವಣಾ ಕಳೆ ಕಳೆಗಟ್ಟಿದೆ.


ಕೇಂದ್ರ ಚುನಾವಣಾ ಆಯೋಗವು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ನಿಗದಿಪಡಿಸುತ್ತಿದ್ದಂತೆಯೇ ಜಿಲ್ಲಾ ಚುನಾವಣಾ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ನಾಳೆಯಿಂದಲೇ (ಮಾರ್ಚ್ 17) ಅಧಿಕೃತವಾಗಿ ಚುನಾವಣಾ ನೀತಿಸಂಹಿತೆ ಜಾರಿಗೆ ಬರಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿರುವ ರಾಜಕೀಯ ಪ್ರಚಾರದ ಫಲಕಗಳನ್ನು ತಕ್ಷಣವೇ ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಈ ಬೆನ್ನಲ್ಲೇ ಬಾಗಲಕೋಟೆ ನಗರಸಭಾ ಕಾರ್ಮಿಕರು ಹಾಗೂ ಚುನಾವಣಾ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಬಾಗಲಕೋಟೆಯ ನವನಗರ ಸೇರಿದಂತೆ ವಿವಿಧ ಗಲ್ಲಿಗಳಲ್ಲಿ ಅಳವಡಿಸಲಾಗಿದ್ದ ರಾಜಕೀಯ ಮುಖಂಡರ ಬ್ಯಾನರ್, ಫ್ಲೆಕ್ಸ್ ಹಾಗೂ ಪಕ್ಷದ ಧ್ವಜಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು. ನೀತಿಸಂಹಿತೆ ಉಲ್ಲಂಘನೆಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಜಿಲ್ಲಾಡಳಿತ, ಕ್ಷೇತ್ರದಾದ್ಯಂತ ಬಿಗಿ ಕ್ರಮ ಕೈಗೊಂಡಿದೆ. ಒಟ್ಟಾರೆಯಾಗಿ ಬಾಗಲಕೋಟೆ ಅಖಾಡದಲ್ಲಿ ಉಪಚುನಾವಣೆಯ ಬಿಸಿ ಅಧಿಕೃತವಾಗಿ ಆರಂಭವಾಗಿದ್ದು, ಸಾರ್ವಜನಿಕ ವಲಯದಲ್ಲಿ ಕುತೂಹಲ ಗರಿಗೆದರಿದೆ.
