ಬಾಗಲಕೋಟೆ ತಾಲೂಕಿನ ರಾಂಪುರ ಗ್ರಾಮದಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಸ್ ನಿಲ್ದಾಣಕ್ಕಾಗಿ ಭೂಮಿ ಮಂಜೂರಾಗಿದ್ದರೂ, ನಾಲ್ಕು ವರ್ಷಗಳಿಂದ ಗ್ರಾಮಸ್ಥರು ಪತ್ರ ಬರೆದರೂ ಕಣ್ಣು ಬಿಡದ ಅಧಿಕಾರಿಗಳ ವಿರುದ್ಧ ಈಗ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ.

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ರಾಂಪುರ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಲು 2021ರಲ್ಲೇ 1 ಎಕರೆ 11 ಗುಂಟೆ ಜಮೀನನ್ನು ಮೀಸಲಿಡಲಾಗಿತ್ತು. ಆದರೆ, ಭೂಮಿ ಮಂಜೂರಾಗಿ ನಾಲ್ಕು ವರ್ಷ ಕಳೆದರೂ ಇಟ್ಟಿಗೆಯೂ ಕದಲಿಲ್ಲ. ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಗ್ರಾಮಸ್ಥರು ಹತ್ತಾರು ಬಾರಿ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಈ ಉದಾಸೀನತೆಯ ಲಾಭ ಪಡೆದ ಕೆಲವರು, ನಿಲ್ದಾಣಕ್ಕಾಗಿ ಮೀಸಲಿದ್ದ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಸಾರ್ವಜನಿಕರ ಆಸ್ತಿಯನ್ನು ಉಳಿಸಿ, ಕೂಡಲೇ ಅತಿಕ್ರಮಣ ತೆರವುಗೊಳಿಸಬೇಕೆಂದು ಜನ ಆಗ್ರಹಿಸುತ್ತಿದ್ದಾರೆ.
ಮತ್ತೊಂದೆಡೆ, ಸದ್ಯ ಗ್ರಾಮದಲ್ಲಿರುವ ತಾತ್ಕಾಲಿಕ ಬಸ್ ನಿಲ್ದಾಣವು ನರಕಸದೃಶವಾಗಿದೆ. ಸ್ವಚ್ಛತೆ ಮಾಯವಾಗಿದ್ದು, ಕಸದ ರಾಶಿ ಹಾಗೂ ಧೂಳಿನ ನಡುವೆಯೇ ಪ್ರಯಾಣಿಕರು ಬಸ್‌ಗಾಗಿ ಕಾಯಬೇಕಾದ ದುಸ್ಥಿತಿ ಇದೆ. ಕುಡಿಯುವ ನೀರು, ನೆರಳು ಮತ್ತು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯಿಲ್ಲದೆ ವೃದ್ಧರು ಮತ್ತು ಶಾಲಾ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರಾಂಪುರ ಗ್ರಾಮಕ್ಕೆ ಸುಸಜ್ಜಿತ ಬಸ್ ನಿಲ್ದಾಣ ಕಲ್ಪಿಸಿಕೊಡಬೇಕಿದೆ.
