ಜಿಲ್ಲೆಯ ಸಾರ್ವಜನಿಕರು, ಗೃಹಬಳಕೆ ಅಡಿಗೆ ಅನಿಲ ಗ್ರಾಹಕರು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು. ದೇಶಾದ್ಯಂತ ಎಲ್ಪಿಜಿ ಉತ್ಪಾದನೆ ಮತ್ತು ಬಾಟಲಿಂಗ್ ಎರಡೂ ಹೆಚ್ಚಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಸದ್ಯ ಸಿಲೆಂಡರ್ ದಾಸ್ತಾನು ಲಭ್ಯವಿದೆ. ಆದ್ದರಿಂದ ಗ್ರಾಹಕರು ಗಾಬರಿಗೊಳ್ಳಬಾರದೆಂದು ಹಾಗೂ ಹೆಚ್ಚುವರಿಯಾಗಿ ಸಿಲೆಂಡರ್ಗಳ ದಾಸ್ತಾನು ಮಾಡಿಕೊಳ್ಳಬಾರದೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಹೆಚ್ಚೆಚ್ಚು ಗ್ರಾಹಕರು ಮುಂಚಿತವಾಗಿ ಬುಕ್ಕಿಂಗ್ ಮಾಡುತ್ತಿರುವುದರಿಂದ ಐವಿಆರ್ಎಸ್, ಮಿಸಡ್ ಕಾಲ್ ಮಾಡುವ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಿ ಸದರಿ ಸಿಸ್ಟಮ್ಗಳು ಕಾರ್ಯನಿರ್ವಹಿಸುತ್ತಿಲ್ಲ. ಆದ್ದ್ದರಿಂದ ಪರ್ಯಾಯವಾಗಿ ಐಒಸಿಎಲ್, ಎಚ್ಪಿಸಿಎಲ್ ಮತ್ತು ಬಿಪಿಸಿಎಲ್ ಎಲ್ಪಿಜಿ ತೈಲ ಕಂಪನಿಗಳು ಗ್ರಾಹಕರಿಗೆ 6 ಬುಕ್ಕಿಂಗ್ ವಿಧಾನಗಳನ್ನು ಕಲ್ಪಿಸಿವೆ. ಗ್ರಾಹಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಈ ಸೌಲಭ್ಯಗಳನ್ನು ಬಳಸಬಹುದು. ಗ್ರಾಹಕರು ಪ್ರತಿ ಗೃಹಬಳಕೆಯ ಸಿಲೆಂಡರ್ನ್ನು ಬುಕ್ಕ್ ಮಾಡಿ ಪಡೆದುಕೊಂಡ ನಂತರ ಮತ್ತೊಂದು ಗೃಹಬಳಕೆಯ ಸಿಲೆಂಡರ್ ಬೇಡಿಕೆಗಾಗಿ 25 ದಿನಗಳ ನಂತರ ಬುಕ್ಕ್ ಮಾಡಲು ಅವಕಾಶವಿರುತ್ತದೆ. ಜಿಲ್ಲೆಯಲ್ಲಿ ಎಲ್ಪಿಜಿ ಸಿಲೆಂಡರ್ಗಳ ಕೊರತೆ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು, ಜಿಲ್ಲೆಯ ಎಲ್ಲಾ ಎಲ್ಪಿಜಿ ಗ್ರಾಹಕರು ಭಯಪಡುವ ಅಗತ್ಯವಿಲ್ಲ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಒಂದು ವೇಳೆ ಯಾವದೇ ಸಮಸ್ಯೆ ಕಂಡುಬಂದಲ್ಲಿ ಜಿಲ್ಲೆಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಪರಿಹರಿಸಿಕೊಳ್ಳಬಹುದು. ಸಾರ್ವಜನಿಕರು, ಎಲ್ಪಿಜಿ ಗ್ರಾಹಕರು ಸಮಸ್ಯೆಗಳಿದ್ದಲ್ಲಿ ಧಾರವಾಡ ನಗರ (ಸಹಾಯಕ ನಿರ್ದೇಶಕರು-9164603114 ಮತ್ತು ಆಹಾರ ನಿರೀಕ್ಷಕ-8296702244) ಕರೆ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ. ಜತೆಗೆ ಗೃಹಬಳಕೆ ಸಿಲೆಂಡರ್ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸಬಾರದು. ಅಲ್ಲದೇ ಸಿಲೆಂಡರ್ಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಂದು ಸಿಲೆಂಡರ್ನಿಂದ ಮತ್ತೊಂದು ಸಿಲೆಂಡರ್ಗೆ ವರ್ಗಾಯಿಸುವದು ಅಪರಾಧವಾಗಿರುತ್ತದೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದ ಆಹಾರ ನಿರೀಕ್ಷಕರ ದೂರವಾಣಿಗಳಿಗೆ ಮಾಹಿತಿ ನೀಡಲು ಸಹ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.
