ರಾಜ್ಯದ ಶಿಕ್ಷಣ ಇಲಾಖೆ ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ “ಓದುವ ಮನೆ” ಯೋಜನೆ ಕಾಗವಾಡ ತಾಲೂಕಿನ ಶೇಡಬಾಳದ ಸನ್ಮತಿ ವಿದ್ಯಾಲಯದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಓದಲು ಅನೇಕ ತೊಂದರೆಗಳು ಎದುರಾಗುತ್ತವೆ. ದಿನನಿತ್ಯದ ರೈತಾಪಿ ಕುಟುಂಬದ ಪ್ರಪಂಚದಲ್ಲಿ ಧನಕರುಗಳು ಪಾಲನ ಪೋಷಣೆ ಮಾಡುವುದು, ವಿದ್ಯುತ್ ಸಮಸ್ಯೆ ಹಾಗೂ ಮನೆಯಲ್ಲಿ ಸ್ಥಳದ ಕೊರತೆ ಮುಂತಾದ ಕಾರಣಗಳಿಂದ ವಿದ್ಯಾರ್ಥಿಗಳು ಶಾಂತ ವಾತಾವರಣದಲ್ಲಿ ಓದುವುದು ಕಷ್ಟವಾಗುತ್ತದೆ.


ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆಯ ಸೂಚನೆಯ ಮೇರೆಗೆ ಚಿಕ್ಕೋಡಿಯ ಡಿಡಿಪಿಐ ಎಸ್. ಸೀತಾರಾಮ್ ಹಾಗೂ ಕಾಗವಾಡ ಬಿಇಒ ಪಾಂಡುರAಗ ಮದಭಾವಿ ಅವರ ಮಾರ್ಗದರ್ಶನದಲ್ಲಿ ಫೆಬ್ರವರಿ ೧೮ರಿಂದ ಶೇಡಬಾಳದ ಸನ್ಮತಿ ವಿದ್ಯಾಲಯದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ “ಓದುವ ಮನೆ” ಕೋಣೆ ವ್ಯವಸ್ಥೆ ಮಾಡಲಾಗಿದೆ. ಶಾಲಾ ಸಮಯದ ನಂತರ ಸಂಜೆ ವೇಳೆಯಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲೇ ಉಳಿದುಕೊಂಡು ವಿಷಯ ಶಿಕ್ಷಕರಿಂದ ಮಾರ್ಗದರ್ಶನ ಪಡೆದು ಓದುವ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಹೆಚ್ಚಿದ್ದು, ಇದರ ಪರಿಣಾಮವಾಗಿ ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಹೊರಬರುವ ನಿರೀಕ್ಷೆ ವ್ಯಕ್ತವಾಗಿದೆ.

ಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಎಂ.ಎನ್.ಕಾಳೆನಟ್ಟಿ ಹಾಗೂ ಎಲ್ಲಾ ವಿಷಯ ಶಿಕ್ಷಕರು ಒಗ್ಗಟ್ಟಿನಿಂದ ವಿದ್ಯಾರ್ಥಿಗಳಿಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಸನ್ಮತಿ ಶಿಕ್ಷಣ ಸಮಿತಿಯ ಅಧ್ಯಕ್ಷ ವಿನೋದ್ ಬರಗಾಲೆ ಹಾಗೂ ಆಡಳಿತ ಮಂಡಳಿಯ ಸದಸ್ಯರು ಸಹ ಯೋಜನೆಗೆ ಸಹಕಾರ ನೀಡುತ್ತಿದ್ದಾರೆ.
ಯೋಜನೆಯ ಮಾಹಿತಿ ತಿಳಿದ ಬಳಿಕ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉತ್ಕರ್ಷ ಪಾಟೀಲ್ ಹಾಗೂ ಚುನಾಯಿತ ಸದಸ್ಯರು ಮತ್ತು ವಿದ್ಯಾರ್ಥಿಗಳ ಪಾಲಕರು ಮುಂದೆ ಬಂದು ಅಡುಗೆ ಸಾಮಗ್ರಿ ಹಾಗೂ ಹಣಕಾಸಿನ ಸಹಾಯ ನೀಡುತ್ತಿದ್ದಾರೆ. ಇದರಿಂದ ಸನ್ಮತಿ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಓದುವ ವಾತಾವರಣ ನಿರ್ಮಾಣವಾಗಿದೆ.
ವಿಷಯ ಶಿಕ್ಷಕರಾದ ಎಸ್.ಬಿ. ಇರಜ್, ಎಚ್.ಡಿ. ಮುತಾಲಿಕ್, ಎಚ್.ಪಿ. ನಾಯಿಕ, ಎ.ಕೆ. ಪಾಟೀಲ್, ಶ್ರೀಮತಿ ಎಸ್.ಎಸ್. ಭಂಡಾರಿ, ಎಸ್.ಎಸ್. ಅಂಕಲಕೊಪ್ಪೆ, ಎಂ.ಕೆ. ಕಾಂಬಳೆ, ಪ್ರೇಮ ನಾಟೇಕರ್ ಸೇರಿದಂತೆ ಇತರ ಶಿಕ್ಷಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಓದುವ ಮನೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ಮನೆಯಲ್ಲಿ ಓದಲು ಅನೇಕ ತೊಂದರೆಗಳಿದ್ದು ಇಲ್ಲಿ ಉಳಿದು ಓದುತ್ತಿರುವುದರಿಂದ ಸ್ಮರಣಶಕ್ತಿ ಹೆಚ್ಚಿದ್ದು ಪರೀಕ್ಷೆಗೆ ಉತ್ತಮವಾಗಿ ತಯಾರಿ ಮಾಡಿಕೊಳ್ಳಲು ಸಹಾಯವಾಗುತ್ತಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೇಲಿಂದ ಮೇಲೆ ಭೇಟಿ ನೀಡಿ ಸಹಕಾರ ನೀಡುತ್ತಿರುವುದರಿಂದ ಈ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಉತ್ತಮ ಬದಲಾವಣೆ ಆಗುವ ನಿರೀಕ್ಷೆ ಪಾಲಕರು ಮತ್ತು ಸಂಸ್ಥೆಯ ಆಡಳಿತ ಮಂಡಳಿ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ಕಾಗವಾಡ ತಾಲೂಕಿನ ಇತರ ಶಾಲೆಗಳಲ್ಲಿಯೂ ಈ ಯೋಜನೆ ಜಾರಿಗೊಂಡಿದ್ದು, ಎಸ್ಎಸ್ಎಲ್ಸಿ ಫಲಿತಾಂಶ ಹೆಚ್ಚಿಸಲು ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಇದೇ ಮಾರ್ಚ್ ೧೮ರಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ಪ್ರಾರಂಭಗೊಳ್ಳಲಿವೆ.
