State

ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿರುವ ರಾಜ್ಯ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ…

Share

ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಮರೆತು ಕೇವಲ ಓಲೈಕೆ ರಾಜಕಾರಣದಲ್ಲಿ ತೊಡಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಹಾಕಿದ್ದಾರೆ. ರಂಭಾಪುರಿ ಮಠದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ರಂಭಾಪುರಿ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ತೀವ್ರವಾಗಿ ಟೀಕಿಸಿದರು. ಅಹಿಂದ ವರ್ಗಗಳ ಹೆಸರಿನಲ್ಲಿ ಅಧಿಕಾರ ಹಿಡಿದ ಸಿದ್ದರಾಮಯ್ಯ ಅವರು, ಅಧಿಕಾರಕ್ಕೆ ಬಂದ ಮೇಲೆ ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲಿ ಮಗ್ನರಾಗಿದ್ದಾರೆ. ಇದರಿಂದಾಗಿ ಹಿಂದುಳಿದ, ಶೋಷಿತ ಮತ್ತು ಪೀಡಿತ ಸಮುದಾಯಗಳು ಹಾಗೂ ಯುವಜನತೆ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ರೈತರು ಹತಾಶರಾಗಿದ್ದು, ಸರ್ಕಾರದ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಇಂದಿನ ಹೀನಾಯ ಸ್ಥಿತಿಗೆ ಅಭಿವೃದ್ಧಿ ಶೂನ್ಯ ಆಡಳಿತವೇ ಕಾರಣ ಎಂದು ಕುಟುಕಿದ ವಿಜಯೇಂದ್ರ, ಕಾಂಗ್ರೆಸ್ ಶಾಸಕರೇ ತಮ್ಮದೇ ಸರ್ಕಾರದ ವಿರುದ್ಧ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಭವಿಷ್ಯ ನುಡಿದರು. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿರುವುದರಿಂದ ಶಾಸಕರು ಅಸಮಾಧಾನಗೊಂಡಿದ್ದು, ರಾಜ್ಯದ ಪರಿಸ್ಥಿತಿ ಅಧೋಗತಿಗೆ ತಲುಪಿದೆ ಎಂದು ವಾಗ್ದಾಳಿ ನಡೆಸಿದರು. ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಕೊಂಡೊಯ್ಯುವುದಾಗಿ ಇದೇ ವೇಳೆ ಅವರು ಎಚ್ಚರಿಸಿದರು.

Tags:

error: Content is protected !!