ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಜ್ವಾಲೆ ಇಡೀ ಮಧ್ಯಪ್ರಾಚ್ಯವನ್ನೇ ಆವರಿಸುತ್ತಿದೆ. ಈ ಯುದ್ಧದ ಭೀತಿ ಈಗ ದುಬೈನಲ್ಲಿ ನೆಲೆಸಿರುವ ಕನ್ನಡಿಗರನ್ನು ಕಾಡತೊಡಗಿದೆ. ಬಾಗಲಕೋಟೆ ಮೂಲದ ವಿದ್ಯಾರ್ಥಿಯೊಬ್ಬರು ಯುದ್ಧದ ಆತಂಕದಿಂದಾಗಿ ಹಾಸ್ಟೆಲ್ ರೂಮ್ನಲ್ಲೇ ಕಾಲ ಕಳೆಯುವಂತಾಗಿದೆ
ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕಾದ ಯುದ್ಧದ ವಾತಾವರಣ ತೀವ್ರಗೊಳ್ಳುತ್ತಿದ್ದು, ಇದರ ನೇರ ಪರಿಣಾಮ ದುಬೈನಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಮೇಲೆ ಉಂಟಾಗಿದೆ. ಬಾಗಲಕೋಟೆ ಮೂಲದ ಧ್ರುವ ಹೊಕ್ರಾನಿ ಎಂಬ ಪ್ರತಿಭಾವಂತ ವಿದ್ಯಾರ್ಥಿ ಕಳೆದ ಆರು ತಿಂಗಳಿನಿಂದ ಉನ್ನತ ವ್ಯಾಸಂಗಕ್ಕಾಗಿ ದುಬೈಗೆ ತೆರಳಿದ್ದು, ಸದ್ಯ ಅಲ್ಲಿನ ಮಿಡಲ್ಸೆಕ್ಸ್ ಯೂನಿವರ್ಸಿಟಿಯಲ್ಲಿ (Middlesex University) ಎಂಬಿಎ ಪದವಿ ಪಡೆಯುತ್ತಿದ್ದಾರೆ. ಆದರೆ, ಗಲ್ಫ್ ರಾಷ್ಟ್ರಗಳಲ್ಲಿ ಹಠಾತ್ ಎದುರಾಗಿರುವ ಯುದ್ಧದ ಭೀತಿಯಿಂದಾಗಿ ಈ ಕನ್ನಡಿಗ ವಿದ್ಯಾರ್ಥಿ ಹಾಸ್ಟೆಲ್ ರೂಮ್ನಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದಾರೆ.
ಯುದ್ಧದ ಮುನ್ಸೂಚನೆ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಹಾಗೂ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಹೊರಗೆ ಬರದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರಿಂದಾಗಿ ಧ್ರುವ ಹೊಕ್ರಾನಿ ಅವರು ಸದ್ಯ ಹಾಸ್ಟೆಲ್ನ ಸುರಕ್ಷಿತ ಸ್ಥಳದಲ್ಲೇ ಉಳಿದುಕೊಂಡಿದ್ದಾರೆ. ಮನೆಯಿಂದ ದೂರವಿರುವ ಮಗನ ಸುರಕ್ಷತೆಯ ಬಗ್ಗೆ ಬಾಗಲಕೋಟೆಯಲ್ಲಿರುವ ಪೋಷಕರಲ್ಲಿ ಆತಂಕ ಮನೆಮಾಡಿದ್ದು, ಧ್ರುವ ಅವರು ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಈ ಬಿಕ್ಕಟ್ಟು ಶೀಘ್ರವೇ ತಿಳಿಯಲಿ ಎಂಬುದು ಎಲ್ಲರ ಆಶಯವಾಗಿದೆ.

