ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ಈಗ ಕೇವಲ ಆ ಎರಡು ದೇಶಗಳಿಗಷ್ಟೇ ಸೀಮಿತವಾಗಿಲ್ಲ. ಇಡೀ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಆವರಿಸಿದ್ದು, ಅಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ಜೀವಕ್ಕೆ ಸಂಚಕಾರ ಬಂದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯುವಕ ಉಮರ್ ಫಾರೂಕ್ ಕುವೈತ್ನಲ್ಲಿ ಯುದ್ಧದ ಭೀಕರತೆಯ ನಡುವೆ ಸಿಲುಕಿಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜಲಗೇರಿ ಗ್ರಾಮದ ನಿವಾಸಿ ಉಮರ್ ಫಾರೂಕ್ ಕಳೆದ ಮೂರು ವರ್ಷಗಳಿಂದ ಬದುಕಿನ ಬಂಡಿ ಸಾಗಿಸಲು ಕುವೈತ್ಗೆ ತೆರಳಿದ್ದರು. ಅಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಉಮರ್, ಈಗ ಇರಾನ್-ಇಸ್ರೇಲ್ ಯುದ್ಧದ ಸುಳಿಗೆ ಸಿಲುಕಿದ್ದಾರೆ. ಸದ್ಯ ಉಮರ್ ಫಾರೂಕ್ ನೆಲೆಸಿರುವ ಪ್ರದೇಶದಲ್ಲಿ ಯುದ್ಧದ ವಾತಾವರಣ ತಾರಕಕ್ಕೇರಿದ್ದು, ಮಿಲಿಟರಿ ಪಡೆಗಳು ಯಾರೂ ಮನೆಯಿಂದ ಹೊರಬರದಂತೆ ಕಟ್ಟುನಿಟ್ಟಿನ ಸೂಚನೆ ನೀಡಿವೆ. ಈ ಹಿನ್ನೆಲೆಯಲ್ಲಿ ಉಮರ್ ಫಾರೂಕ್ ಕಳೆದ ಕೆಲವು ದಿನಗಳಿಂದ ಮನೆಯೊಳಗೆ ಬಂಧಿಯಾಗಿದ್ದಾರೆ.
ತಮ್ಮ ಸುತ್ತಮುತ್ತ ನಡೆಯುತ್ತಿರುವ ಭೀಕರ ಯುದ್ಧದ ದೃಶ್ಯಗಳನ್ನು ಉಮರ್ ಫಾರೂಕ್ ಸೆರೆಹಿಡಿದು ಹಂಚಿಕೊಂಡಿದ್ದಾರೆ. ಆಕಾಶದಲ್ಲಿ ಕ್ಷಿಪಣಿಗಳು ಹಾರಿ ಬರುತ್ತಿರುವ ದೃಶ್ಯಗಳು ಎದೆ ನಡುಗಿಸುವಂತಿದ್ದು, ಯಾವಾಗ ಏನಾಗುತ್ತೋ ಎಂಬ ಆತಂಕದಲ್ಲಿ ಇಡೀ ಜಲಗೇರಿ ಗ್ರಾಮದ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ
