ಮುಖ್ಯಮಂತ್ರಿ ಸಿದ್ದರಾಮಯ್ಯನವರ “ಮಗನನ್ನು ನೋಡಿಕೊಳ್ಳಿ” ಎಂಬ ಹೇಳಿಕೆ ಇದೀಗ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ಸಿಎಂ ತಮ್ಮ ಹೇಳಿಕೆಯ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಕ್ಕೆ ತಿಲಾಂಜಲಿ ಇಟ್ಟಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಾವು ಸಮಾಜವಾದಿ, ಜಾತಿವಾದಿ, ಕುಟುಂಬವಾದಿ ಅಲ್ಲ ಎನ್ನುತ್ತಿದ್ದರು. ಈಗ ತಮ್ಮ ಮಗನನ್ನು ನೋಡಿಕೊಳ್ಳಿ ಎಂದಿದ್ದಾರೆ. ಇಷ್ಟು ದಿನ ಅವರನ್ನ ನೋಡಿಕೊಂಡಿದ್ದಾಯಿತು. ಈಗ ಮುಂದೆ ನಮ್ಮ ಮೊಮ್ಮಕ್ಕಳನ್ನು ನೋಡಿಕೊಳ್ಳಿ ಎನ್ನುತ್ತಾರೆ. ಮೊದಲಿನ ಕಾಲದಲ್ಲಿ ರಾಜ ಮನೆಗಳಿದ್ದವು. ರಾಜನಾದ ಮೇಲೆ ಯುವರಾಜನ ಆಳ್ವಿಕೆ ಬರುತ್ತಿತ್ತು. ಅದನ್ನ ಡಾ. ಅಂಬೇಡ್ಕರರ ಸಂವಿಧಾನದ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾಯಿಸಲಾಯಿತು. ಆದರೇ, ಸಿಎಂ ಸಿದ್ಧರಾಮಯ್ಯನವರು ತಮ್ಮ ಹೇಳಿಕೆಯ ಮೂಲಕ ಅಂಬೇಡ್ಕರರ ಸಂವಿಧಾನಕ್ಕೆ ತೀಲಾಂಜಲಿ ಇಟ್ಟಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಚುನಾವಣೆಯಿಂದ ಗೆದ್ದು ಬರಬೇಕು. ಅದನ್ನ ಬಿಟ್ಟು ಮಗನನ್ನು ನೋಡಿಕೊಳ್ಳಿ ಎನ್ನುವುದು ಅಂಬೇಡ್ಕರ ಅವರ ಸಿದ್ಧಾಂತಕ್ಕೆ ಅಪಚಾರ ಮಾಡಿದಂತೆ ಎಂದರು.
