ರಾಜ್ಯದಲ್ಲೇ ಪ್ರಪ್ರಥಮವಾಗಿ ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಲಾಗುವುದು. ಇದಕ್ಕೆ ಶಾಸಕರ ಅನುದಾನದಿಂದ 1 ಕೋಟಿ ರೂಪಾಯಿ ಅನುದಾನವನ್ನು ನೀಡುವುದಾಗಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಘೋಷಿಸಿದರು.


ಬೆಳಗಾವಿಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಿಂದ ಮಹಾನಗರ ಪಾಲಿಕೆಯ ವತಿಯಿಂದ ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಮಹಾಪೌರ ಚಷಕ ಅಂತರ ಮಹಾವಿದ್ಯಾಲಯ ಫೂಟ್’ಬಾಲ್ ಪಂದ್ಯಾವಳಿಗೆ ಇಂದಿನಿಂದ ಚಾಲನೆ ದೊರೆಯಿತು. ದಕ್ಷಿಣ ಶಾಸಕ ಅಭಯ್ ಪಾಟೀಲ್ ಮಹಾಪೌರ ಮಂಗೇಶ್ ಪವಾರ್, ಉಪಮಹಾಪೌರ ವಾಣಿ ಜೋಷಿ, ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ ಇನ್ನುಳಿದ ಗಣ್ಯರು ದೀಪ ಬೆಳಗಿಸಿ, ಬಲೂನುಗಳನ್ನು ಹಾರಿ ಬಿಟ್ಟು ಪಂದ್ಯಾವಳಿಯನ್ನು ಉದ್ಘಾಟಿಸಿದರು.

ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು, ಬೆಳಗಾವಿಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಹಾಪೌರ ಟ್ರೋಫಿ ಕ್ರೀಡಾ ಮಹೋತ್ಸವವನ್ನು ಆಯೋಜಿಸಲಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ಕೇವಲ ರಸ್ತೆ, ಚರಂಡಿಗಳ ಅಭಿವೃದ್ಧಿಯಷ್ಟೇ ಅಲ್ಲ, ಪ್ರತಿ ವರ್ಷ ಮಹಾಪೌರ ಟ್ರೋಫಿಯನ್ನು ಆಯೋಜಿಸಲಾಗುತ್ತದೆ. ಬೆಳಗಾವಿಯಲ್ಲಿ ಇತ್ತಿಚೆಗೆ ಫೂಟ್’ಬಾಲ್ ಕ್ರೇಜ್ ಹೆಚ್ಚಾಗುತ್ತಿದ್ದು, ಇದಕ್ಕೆ ಪ್ರೋತ್ಸಾಹಿಸಲು ಫೂಟ್’ಬಾಲ್ ಮೈದಾನವನ್ನು ನಿರ್ಮಿಸಲು ಶಾಸಕರ ಅನುದಾನದಲ್ಲಿ 1 ಕೋಟಿ ನೀಡುವುದಾಗಿ ಘೋಷಿಸಿದರು. ಕರ್ನಾಕಟದಲ್ಲೇ ಮೊದಲಬಾರಿ ಯಳ್ಳೂರಿನಲ್ಲಿ 5 ಎಕರೆಯಲ್ಲಿ ಇಂಟರ್ ನ್ಯಾಷನಲ್ ಸ್ಫೋರ್ಟ್ ಕಾಂಪ್ಲೇಕ್ಸ್ ನಿರ್ಮಿಸುವುದಾಗಿ ತಿಳಿಸಿದರು.

ಮಹಾಪೌರ ಮಂಗೇಶ್ ಪವಾರ್ ಅವರು ಬೆಳಗಾವಿಯ ಕ್ರೀಡಾಳುಗಳಿಗೆ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಿಸುವುದಾಗಿ ಘೋಷಿಸಿದ ಶಾಸಕ ಅಭಯ್ ಪಾಟೀಲ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ಬೆಳಗಾವಿಯಲ್ಲಿ ಮಹಾಪೌರ ಟ್ರೋಫಿಯನ್ನು ಪ್ರತಿವರ್ಷ ಆಯೋಜಿಸಿ, ಕ್ರೀಡಾಳುಗಳಿಗೆ ಪ್ರೋತ್ಸಾಹಿಸಲು ಇನ್ನು ಹೆಚ್ಚಿನ ಉತ್ತೇಜನವನ್ನು ನೀಡಿ ಅಂತರಾಷ್ಟ್ರೀಯ ಆಟಗಳನ್ನು ಆಡಿಸಬೇಕು. ಇದರಿಂದ ಬೆಳಗಾವಿಯ ಉದಯೋನ್ಮುಖ ಕ್ರೀಡಾಪಟುಗಳಿಗೆ ವೇದಿಕೆ ಸಿಗಲಿದೆ ಎಂದರು.

ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ., ಅವರು ಯುವಕರು ವಿದ್ಯಾಭ್ಯಾಸದೊಂದಿಗೆ ಕ್ರೀಡಾಕೂಟಗಳ ಮೂಲಕ ಸದೃಢ ಆರೋಗ್ಯವನ್ನು ಹೊಂದಲೂ ಮಹಾನಗರ ಪಾಲಿಕೆಯ ವತಿಯಿಂದ ಮಹಾಪೌರ ಟ್ರೋಫಿಯನ್ನು ಆಯೋಜಿಸಲಾಗುತ್ತದೆ ಎಂದರು. ಇದೇ ವೇಳೆ ಶಾಸಕರು ಘೋಷಿಸಿದ ಅಂತರಾಷ್ಟ್ರೀಯ ಫೂಟ್’ಬಾಲ್ ಮೈದಾನ ನಿರ್ಮಾಣಕ್ಕೆ ಪಾಲಿಕೆಯ ವತಿಯಿಂದಲೂ ಸಹಕಾರ ನೀಡುವುದಾಗಿ ತಿಳಿಸಿದರು.


ವಿವಿಧ ಕಾಲೇಜಿನ ತಂಡಗಳು ಇದರಲ್ಲಿ ಭಾಗವಹಿಸಿವೆ. ಈ ವೇಳೆ ಮಹಾನಗರ ಪಾಲಿಕೆ ಸದಸ್ಯರಾದ ಗಿರೀಶ್ ಧೋಂಗಡಿ, ಶ್ರೇಯಸ್ ನಾಕಾಡಿ, ಆನಂದ ಚವ್ಹಾಣ್, ರಮೇಶ್ ಮೈಲ್ಯಾಗೋಳ ಇನ್ನುಳದವರು ಭಾಗಿಯಾಗಿದ್ಧರು.

