Kagawad

ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಹೆಚ್ಚಿನ ಸಹಕಾರ ನೀಡಲಿ – ಡಾ. ರಮೇಶ್ ದೊಡ್ಡನವರ್

Share

ಕಬ್ಬು ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವುದರಿಂದ, ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ರೈತರಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಾಯ-ಸೌಲಭ್ಯಗಳನ್ನು ನೀಡಬೇಕು. ರೈತರು ಉತ್ತಮವಾಗಿ ಕಬ್ಬು ಬೆಳೆದು ಅಧಿಕ ಇಳುವರಿ ಪಡೆದರೆ ಮಾತ್ರ ಸಕ್ಕರೆ ಉದ್ಯಮ ಸುಗಮವಾಗಿ ಮುಂದುವರಿಯಲು ಸಾಧ್ಯ ಎಂದು ಕಾಗವಾಡದ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರಮೇಶ್ ದೊಡ್ಡನವರ್ ಹೇಳಿದರು.

ಗುರುವಾರ ಕಾಗವಾಡದ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯಲ್ಲಿ 13ನೇ ಕಬ್ಬು ನುರಿಸುವ ಹಂಗಾಮಿನ ಸಮಾರೋಪದ ಹಿನ್ನೆಲೆಯಲ್ಲಿ, ಕಬ್ಬು ಸಾಗಾಟದಲ್ಲಿ ತೊಡಗಿದ್ದ ಕಾರ್ಮಿಕರು ಹಾಗೂ ಅಧಿಕಾರಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಈ ಹಂಗಾಮಿನಲ್ಲಿ 116 ದಿನಗಳ ಅವಧಿಯಲ್ಲಿ ಸುಮಾರು 8 ಲಕ್ಷ 9 ಸಾವಿರ ಟನ್ ಕಬ್ಬನ್ನು ನುರಿಸುವ ಮೂಲಕ ಈ ವರ್ಷದ ಹಂಗಾಮನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ” ಎಂದು ತಿಳಿಸಿದರು.

ಕಾರ್ಖಾನೆಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಕಲ್ಲಪ್ಪಣ್ಣಾ ಮಗೆಣ್ಣವರ್ ಮಾತನಾಡಿ, “ಈ ಹಂಗಾಮಿನಲ್ಲಿ ರೈತರು ಸಮಯಕ್ಕೆ ಸರಿಯಾಗಿ ಕಬ್ಬು ಪೂರೈಸಿದ್ದಾರೆ. ಕಾರ್ಮಿಕರು ಪ್ರಾಮಾಣಿಕವಾಗಿ ಶ್ರಮಿಸಿ, ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಿದ್ದರಿಂದ ಹಂಗಾಮು ಯಶಸ್ವಿಯಾಗಿದೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು” ಎಂದರು.

ಸಕ್ಕರೆ ಕಾರ್ಖಾನೆಯ ಆಡಳಿತಾಧಿಕಾರಿ ಅರುಣ್ ಫರಾಂಡೆ ಮಾತನಾಡಿ, “ಪ್ರಸಕ್ತ ಹಂಗಾಮಿನಲ್ಲಿ ಇತರ ಅನೇಕ ಸಕ್ಕರೆ ಕಾರ್ಖಾನೆಗಳಿಗಿಂತ ನಮ್ಮ ಕಾರ್ಖಾನೆ ಹೆಚ್ಚು ದಿನ ಕಾರ್ಯನಿರ್ವಹಿಸಿದೆ. ಮಹಾರಾಷ್ಟ್ರದ ಅನೇಕ ಕಾರ್ಖಾನೆಗಳು ಹಂಗಾಮು ಮುಕ್ತಾಯಗೊಳಿಸಿದ ನಂತರವೂ ನಮ್ಮ ಕಾರ್ಖಾನೆ ಕಬ್ಬು ನುರಿಸುವ ಕಾರ್ಯ ಮುಂದುವರಿಸಿತ್ತು” ಎಂದು ಹೆಮ್ಮೆಯಿಂದ ತಿಳಿಸಿದರು.

ಇದೇ ಸಂದರ್ಭದಲ್ಲಿ ಹಂಗಾಮಿನಲ್ಲಿ ನಿರಂತರವಾಗಿ ಕಬ್ಬು ಪೂರೈಸಿದ ಕಟಾವು ಕಾರ್ಮಿಕರು, ವಾಹನ ಮಾಲೀಕರು ಹಾಗೂ ಕಾರ್ಖಾನೆಯ ಸಿಬ್ಬಂದಿಯನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಖಾನೆಯ ಮುಖ್ಯಾಧಿಕಾರಿ ವೀರೇಂದ್ರ ಜಾಡರ್, ಲಕ್ಷ್ಮಿ ಬ್ಯಾಂಕ್ ಅಧ್ಯಕ್ಷ ಶೀತಲ್ ಮಗೆಣ್ಣವರ್, ಸತೀಶ್ ಮಗೆಣ್ಣವರ್, ಸಾಗರ್ ಮಂಗಸೂಳೆ, ಮಹಾವೀರ್ ಬಿರ್ನಾಳೆ, ಪ್ರದೀಪ್ ಮಗೆಣ್ಣವರ್, ಪ್ರವೀಣ್ ಚೌಗುಲೆ, ವಿದ್ಯಾಧರ್ ಧೊಂಡಾರೆ, ಕೌತುಕ ಮಗೆಣ್ಣವರ್, ಶಿವಲಿಂಗ ಬೆಳಂಕೆ, ಅಜಿತ್ ಚೌಗುಲೆ, ಸಂಜೀವಕುಮಾರ ನಾಯಿಕ, ಉಲ್ಲಾಸ್ ಪಾಟೀಲ್, ಬಸವರಾಜ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Tags:

error: Content is protected !!