ವಿಧಾನ ಸಭೆಯ ಕಲಾಪದಲ್ಲಿ ಇಂದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು. ಸರ್ಕಾರಿ ಉತ್ತರಗಳ ವಿಳಂಬ ಮತ್ತು ಸಚಿವರ ಗೈರುಹಾಜರಿಯಿಂದ ಬೇಸತ್ತ ವಿರೋಧ ಪಕ್ಷದ ನಾಯಕ ಆರ್. ಅಶೋಕ್, “ಸರ್ಕಾರ ಸತ್ತೋಗಿದೆ, ತಿಥಿ ಮಾಡಬೇಕು” ಎಂದು ಗುಡುಗಿದರು. ಸದಸ್ಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಕಠಿಣ ಸಂದೇಶ ರವಾನಿಸಿದ್ದಾರೆ.

ಗೃಹ ಸಚಿವ ಜಿ. ಪರಮೇಶ್ವರ ಅವರು ಸದನದಲ್ಲಿ ಕೇಳಿದ 230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಲಿಖಿತ ಉತ್ತರಗಳನ್ನು ನೀಡಲಾಗಿದೆ ಎಂದರು. ಇದಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಶೇ. 50 ರಷ್ಟು ಪ್ರಶ್ನೆಗಳಿಗೂ ಉತ್ತರವನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಿನ್ನೆ ಮೊನ್ನೆಯಿಂದ ಹೇಳಿದರೂ ಯಾರೂ ಕೂಡ ಎಚ್ಚೆತ್ತುಕೊಳ್ಳುತ್ತಿಲ್ಲ. ಸರ್ಕಾರ ಸತ್ತೋಗಿದೆ. ತಿಥಿ ಮಾಡಬೇಕೆಂದರು.
ಸಭಾಧ್ಯಕ್ಷ ಯು.ಟಿ ಖಾದರ್ ಫರೀದ್ ಅವರು ಸದನ ನಡೆಯುವುದು ಸಚಿವರಿಗಾಗಿ ಅಲ್ಲ. ಶಾಸಕರಿಗಾಗಿ ನಡೆಸಲಾಗುತ್ತದೆ. ಅವರ ಸಮಸ್ಯೆಗಳನ್ನು ಆಲಿಸಲು ಪರಿಹರಿಸಲು ಸದನ ನಡೆಸಲಾಗುತ್ತದೆ. ಎಲ್ಲರಿಗೂ ಚುಕ್ಕೆ ಗುರುತಿನ ಪ್ರಶ್ನೆಗೆ ಅವಕಾಶ ಸಿಗುವುದಿಲ್ಲ. ಸಚಿವರು ಸಮಯದಲ್ಲಿ ಬರುವುದಿಲ್ಲ. ಹಲವಾರು ಬಾರಿ ಸೂಚಿಸಿದರೂ, ಸುಧಾರಣೆಯಾಗುತ್ತಿಲ್ಲ. ಎಲ್ಲ ಸದಸ್ಯರು ಮೆಚ್ಚುವಂತೆ ಸದನ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಸಚಿವರು ಮತ್ತು ಕಾರ್ಯದರ್ಶಿ ಆಗಮಿಸಿ ಉತ್ತರ ನೀಡುವವರೆಗೂ ಸದನವನ್ನು ನಡೆಸುವುದಿಲ್ಲ. ಸದನವನ್ನು ಮುಂದೂಡೂವುದಾಗಿ ತಿಳಿಸಿದರು.
