ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲು ಆರೋಪ ಕೇಳಿಬಂದಿರುವುದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಪರೀಕ್ಷೆ ವೇಳೆ ನಕಲು ಮಾಡಲು ಕೆಲ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಯೇ ಸಹಕರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಗುರುವಾರ ಕೇಳಿ ಬಂದಿದೆ.
ರಾಯಬಾಗ ತಾಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆಯುತ್ತಿದೆ ಎಂಬ ವಾಸನೆ ಮೂಡಿದ್ದು, ಪ್ರಶ್ನೆ ಪತ್ರಿಕೆಗೆ ಉತ್ತರಗಳನ್ನು ಹೇಳಿಕೊಡುವ ಮಟ್ಟಕ್ಕೆ ಸಿಬ್ಬಂದಿ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪರೀಕ್ಷಾರ್ಥಿಯೊಬ್ಬ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ನಕಲು ತಡೆಗಟ್ಟಲು ಶಿಕ್ಷಣ ಇಲಾಖೆ ಸಿಸಿಟಿವಿ ಅಳವಡಿಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಕೆಲವೆಡೆ ನಿಯಮ ಉಲ್ಲಂಘನೆ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ. ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಅಕ್ರಮ ಮುಂದುವರಿಯುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
