Dharwad

ಜೀತ ಒಂದು ಅನಿಷ್ಠ ಪದ್ಧತಿ, ತಡೆಗಟ್ಟಲು ಎಲ್ಲರೂ ಕೈಜೋಡಿಸಿ- ಡಿಸಿ ಸ್ನೇಹಲ್ ಆರ್.

Share

ಜೀತ ಪದ್ಧತಿಯು ಒಂದು ಅನಿಷ್ಠ ಸಂಪ್ರದಾಯವಾಗಿದೆ. ಇದು ಸಮಾನತೆ ಮತ್ತು ಮಾನವ ವಿರೋಧಿಯಾಗಿದೆ. ಇದನ್ನು ತಡೆಗಟ್ಟಲು ಸಮಾಜದ ಎಲ್ಲರೂ ಕೈಜೋಡಿಸಬೇಕು. ಮತ್ತು ವಿಶೇಷವಾಗಿ ಸಂಬಂಧಿಸಿದ ಇಲಾಖೆಗಳ ಮತ್ತು ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಅಧಿಕಾರಿಗಳಿಗೆ ಕರೆ ನೀಡಿದರು.

ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಜೀತ ಪದ್ಧತಿ (ರದ್ಧತಿ) ಕಾಯ್ದೆ 1976 ಹಾಗೂ ಬಾಲ ಮತ್ತು ಕಿಶೋರ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ತಿದ್ದುಪಡಿ ಕಾಯ್ದೆ 2016 ರ ಕುರಿತು (ಕಲಂ 17 ರಡಿ) ನೇಮಕಗೊಂಡ ಜೀತ ಪದ್ಧತಿ ನಿಷೇದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದ ಅವರು, ಜೀತ ಪದ್ಧತಿಯನ್ನು ಸಂಪೂರ್ಣವಾಗಿ ತೊಲಗಿಸಿ, ಜೀತ ಮುಕ್ತ ಜಿಲ್ಲೆ ಹಾಗೂ ಸಮಾಜವನ್ನು ರೂಪಿಸಲು ಸಾಧ್ಯವಾಗುತ್ತದೆ. ಜೀತ ಪದ್ಧತಿ ದಾಸ್ಯದ ಸಂಕೇತ. ಜೀತ ಮುಕ್ತ ಸಮಾಜವಾಗಲು ಮತ್ತು ಪರಸ್ಪರಲ್ಲಿ ಸಮಾನತೆ ಸಾಧಿಸಲು ಸರ್ಕಾರಗಳು ಅನೇಕ ಕಾಯ್ದೆ ಕಾನೂನುಗಳನ್ನು ಅನುಷ್ಠಾನಗೊಳಿಸಿವೆ. ಅಧಿಕಾರಿಗಳ ಇಚ್ಛಾಶಕ್ತಿಯಿಂದ ಮಾತ್ರ ಇವು ಪರಿಣಾಮಕಾರಿಯಾಗಿ ಜಾರಿಯಾಗಲು ಸಾಧ್ಯವಿದೆ. ಅಧಿಕಾರಿಗಳಲ್ಲಿ ಜೀತ ಪದ್ಧತಿಯನ್ನು ಸಮಾಜದಿಂದ ತೊಲಗಿಸಲು ಸಂಕಲ್ಪ ಮಾಡಿ, ಕರ್ತವ್ಯ ನಿರ್ವಹಿಸಬೇಕು. ಅಂದಾಗ ಕಾಯ್ದೆಗೆ ಬೆಲೆ ಮತ್ತು ಪ್ರಯತ್ನಗಳಿಗೆ ಗೌರವ ಸಿಗುತ್ತದೆ. ಸಮಾಜದಲ್ಲಿ ಸಮಾನತೆ ಸಾಧಿಸಲು ಜೀತ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಜೀತ ಪದ್ಧತಿ ನಿಷೇಧ ಕಾನೂನು ಜಾರಿಗೆ ಬಂದು ಐವತ್ತು ವರ್ಷಗಳಾದರೂ ಇನ್ನೂ ಕೆಲವು ಕಡೆ ಈ ಪದ್ಧತಿ ಕಂಡು ಬರುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಆದ್ದರಿಂದ ಈ ಅನಿಷ್ಠ ಪದ್ಧತಿಯನ್ನು ತಡೆಗಟ್ಟಲು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಕರೆ ನೀಡಿದರು. ‌
ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಜಾಗೃತರಾಗಬೇಕು. ಹಾಗೂ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಾರ್ಯನಿರ್ವಹಿಸಬೇಕು. ಕಾನೂನು ಹೇಗೆ ಹೇಳುತ್ತದೆಯೋ ಅದೇ ರೀತಿಯಲ್ಲಿ ಕಾನೂನಿನ ಅಡಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ಸಮಾಜದಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಎಲ್ಲರೂ ಜಾಗೃತಿಯಿಂದ ಗಮನ ವಹಿಸಬೇಕು. ಸಮಾಜದ ಶಾಂತಿ ಮತ್ತು ಸಮಾನತೆಯನ್ನು ಕಾಪಾಡಲು ಸಾರ್ವಜನಿಕರ ಸಹಕಾರ ಮುಖ್ಯವಾಗುತ್ತದೆ. ಮತ್ತು ರಜಾ ದಿನಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದನ್ನು ತಡೆಯಬೇಕು. ಹಾಗೂ ಬಾಲಕಾರ್ಮಿಕರಾಗಿ ಅವರು ದುಡಿಯದಂತೆ ವಿಶೇಷ ಕಾಳಜಿ ವಹಿಸಬೇಕು. ಮಕ್ಕಳ ಶಿಕ್ಷಣ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಶಾಲೆಗೆ ಹಾಜರಾಗುವಂತೆ ಪ್ರೊತ್ಸಾಹಿಸಬೇಕು ಎಂದು ತಿಳಿಸಿದರು.

ಒಂದು ವೇಳೆ ಮಕ್ಕಳು ಶಾಲೆಯನ್ನು ಬಿಟ್ಟು ಕೆಲಸಕ್ಕೆ ಹೋಗುತ್ತಿರುವುದು ಕಂಡುಬಂದರೆ, ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಮಕ್ಕಳಿಗೆ ಮತ್ತು ಅವರ ಪೆÇೀಷಕರಿಗೆ ಅರಿವು ಮೂಡಿಸಿ, ಮಕ್ಕಳನ್ನು ಮರುಶಾಲೆಗೆ ಕರೆತರುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.

Tags:

error: Content is protected !!