Belagavi

ಕನ್ಹೇರಿಯಲ್ಲಿ ಮಾರ್ಚ್ 31 ರಿಂದ ಸಿದ್ಧಗಿರಿ ಕರಕುಶಲ ‘ಮಹಾಕುಂಭ’

Share

ಮಾರ್ಚ್ 31ರಿಂದ ಕೊಲ್ಹಾಪುರದ ಕನ್ಹೇರಿ ಮಠದಲ್ಲಿ ದೇಶದ ಅಪರೂಪದ ಕರಕುಶಲತೆಗಳನ್ನು ಒಂದೇ ಸೂರಿನಡಿ ಪರಿಚಯಿಸುವ ‘ಸಿದ್ಧಗಿರಿ ಕರಕುಶಲ ಮಹಾಕುಂಭ’ ಬೃಹತ್ ಕಲಾ ಮೇಳ ನಡೆಯಲಿದೆ ಎಂದು ಡಾ. ವರ್ಷಾ ಪಾಟೀಲ್ ಅವರು ಹೇಳಿದರು.

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು. ಸಿದ್ಧಗಿರಿ ಸಂಸ್ಥಾನ ಮಠ ಕನೇರಿ ಮತ್ತು ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಸಹಯೋಗದಲ್ಲಿ ಆಯೋಜಿಸಲಾಗಿರುವ ‘ಸಿದ್ಧಗಿರಿ ಕರಕುಶಲ ಮಹಾಕುಂಭ’ದ ಕುರಿತು ಡಾ. ವರ್ಷಾ ಪಾಟೀಲ್ ಅವರು ಬೆಳಗಾವಿಯಲ್ಲಿ ಮಾಹಿತಿ ನೀಡಿದರು. ಈ ಮಹಾಕುಂಭದಲ್ಲಿ 17 ರಾಜ್ಯಗಳ 200ಕ್ಕೂ ಹೆಚ್ಚು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಕಲಾವಿದರು ಭಾಗವಹಿಸುತ್ತಿದ್ದು, ಸಾಂಪ್ರದಾಯಿಕ ಕಲೆಗಳಿಗೆ ಇಂದಿನ ಜನರ ಅಭಿರುಚಿಗೆ ತಕ್ಕಂತೆ ಮಾರುಕಟ್ಟೆ ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ತಿಳಿಸಿದರು. ಮಾರ್ಚ್ 31ರಿಂದ ಏಪ್ರಿಲ್ 4ರವರೆಗೆ ಐದು ದಿನಗಳ ಕಾಲ ಈ ವಿಶಿಷ್ಟ ಪ್ರದರ್ಶನ ನಡೆಯಲಿದೆ. ಮೇಳದಲ್ಲಿ ಟೆರಾಕೋಟಾ, ಜೇಡಿಮಣ್ಣಿನ ಆಭರಣಗಳು, ಬಿದಿರಿನ ಕೆಲಸ, ಪಿಂಗುಲಿ ಚಿತ್ರಕಲೆ, ಬನಾರಸಿ ಜರ್ದೋಶಿ ಸೀರೆಗಳು ಸೇರಿದಂತೆ ನೂರಾರು ಕಲಾಕೃತಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರಲಿವೆ.

ಪರಿಚಯಾತ್ಮಕವಾಗಿ ಮಾತನಾಡಿದ ವಿವೇಕ್ ಸಿದ ಅವರು, ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳನ್ನು ಈ ಮೇಳಕ್ಕೆ ಆಹ್ವಾನಿಸಲಾಗಿದ್ದು, ಯುವ ಪೀಳಿಗೆಯು ಈ ಕಲೆಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸಿ ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಇದು ಸುಸಂದರ್ಭವಾಗಿದೆ ಎಂದು ಹೇಳಿದರು. ಏಕ್ರವನ್ ಇನಾ ಕಂಪನಿಯು ಸಹ ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ. ಭಾರತದ ಸಾಂಪ್ರದಾಯಿಕ ಕಲೆ ಮತ್ತು ಕಲಾವಿದರನ್ನು ಗೌರವಿಸುವ ಈ ಮಹಾಕುಂಭಕ್ಕೆ ಸಾರ್ವಜನಿಕರು ಕುಟುಂಬ ಸಮೇತರಾಗಿ ಭೇಟಿ ನೀಡಿ ಪ್ರೋತ್ಸಾಹಿಸಬೇಕೆಂದು ಈ ಸಂದರ್ಭದಲ್ಲಿ ಗಣ್ಯರು ಮನವಿ ಮಾಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಸಿದ್ಧಗಿರಿ ಸಂಸ್ಥಾನ ಮಠದ ಕಾರ್ಯನಿರ್ವಾಹಕ ನಿರ್ದೇಶಕ ಯಶೋವರ್ಧನ್ ಬಾರಾಮತಿಕರ್, ವಿವೇಕ್, ದಯಾನಂದ ಡೋಂಗ್ರೆ, ಪ್ರಸಾದ್ ನೆವೇಕರ್ ಮತ್ತು ರಾಮಚಂದ್ರ ಕಟ್ಟಿ ಉಪಸ್ಥಿತರಿದ್ದರು.

Tags:

error: Content is protected !!