ರಾಜ್ಯದಲ್ಲಿ ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದೆಯೇ? ವಿಧಾನ ಪರಿಷತ್ತಿನಲ್ಲಿ ಸದಸ್ಯೆ ಹೇಮಲತಾ ನಾಯಕ ಅವರು ಎತ್ತಿದ ಈ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉತ್ತರಿಸಿದ್ದು, ಮಾಜಿ ದೇವದಾಸಿಯರ ಸಬಲೀಕರಣಕ್ಕಾಗಿ 150 ಕೋಟಿ ರೂಪಾಯಿಗಳ ಬೃಹತ್ ಕ್ರಿಯಾಯೋಜನೆ ಸಿದ್ಧಪಡಿಸಿರುವುದಾಗಿ ಘೋಷಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಸದಸ್ಯೆ ಹೇಮಲತಾ ನಾಯಕ ಅವರು 2007ರಲ್ಲಿ ಸರ್ಕಾರವು ಮಾಜಿ ದೇವದಾಸಿಯರು ಮತ್ತು ಅವರ ಮಕ್ಕಳ ಸಮೀಕ್ಷೆಯನ್ನು ನಡೆಸಿದಾಗ 46,660 ಜನರಿದ್ದು, ಸದ್ಯದ ಸರ್ವೇ ಪ್ರಕಾರ 23, 395 ಜನರಿದ್ದಾರೆ. ವಿವಿಧ ಊರುಗಳಲ್ಲಿ ಹಲವರು ಇತ್ತೀಚೆಗೆ 1700 ಜನ ದೇವದಾಸಿಗಳಿದ್ದಾರೆ. ಸಮೀಕ್ಷೆಯೂ ಸಂಪೂರ್ಣ ರಾಜ್ಯದಲ್ಲಿ ನಡೆಯದೇ ಕೇಲವೇ ಕೆಲ ಪ್ರದೇಶಗಳಲ್ಲಿ ನಡೆದಿದೆ. ಇಂದಿಗೂ ಈ ಪದ್ಧತಿ ನಿಲ್ಲುತ್ತಿಲ್ಲ. ಇದರ ವಿರುದ್ಧ ಕ್ರಮಕೈಗೊಳ್ಳಬೇಕು. ಮಾಜಿ ದೇವದಾಸಿಯರಿಗೆ ಸಹಾಯಧನ ನೀಡಬೇಕೆಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗಾಗಲೇ 3ನೇ ಬಾರಿ 15 ಜಿಲ್ಲೆಗಳಲ್ಲಿ ವೈಜ್ಞಾನಿಕವಾಗಿ ಸರ್ವೆಯನ್ನು ಮಾಡಲಾಗಿದೆ. ಸರ್ಕಾರಕ್ಕೆ ನಿಖರವಾದ ಸಂಖ್ಯೆ ದೊರೆತರೇ, ಅವರಿಗೆ ಸರ್ಕಾರದಲ್ಲಿ ಯೋಜನೆಗಳನ್ನು ರೂಪಿಸಲು ಸಾಧ್ಯ. ಈ ಹಿನ್ನೆಲೆ 105 ದಿನ ಅವಕಾಶವನ್ನು ನೀಡಲಾಗಿದೆ. 23,395 ಜನರ ಮಾಹಿತಿ ದೊರೆತಿದೆ. ಆದರೇ, ಸುಮಾರು 90 ಸಾವಿರ ಜನರು ಸರ್ವೇಯಿಂದ ಹೊರಗುಳಿದಿದ್ದಾರೆ. ವಸತಿ, ಆರ್ಥಿಕಮಟ್ಟ ಸುಧಾರಣೆ, ಇನ್ನುಳಿದ ಯೋಜನೆಗಳಿಗೆ 150 ಕೋಟಿ ರೂಪಾಯಿಯ ಕ್ರೀಯಾಯೋಜನೆಯನ್ನು ತಯಾರಿಸಲಾಗಿದೆ. ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಸಚಿವರೊಂದಿಗೆ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಸಭೆಯನ್ನು ಕರೆದಿದ್ದಾರೆ. ದೇವದಾಸಿಯರು, ಅವರ ಮಕ್ಕಳು ಮತ್ತು ಮೊಮ್ಮಕ್ಕಳ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು ಎಂದರು.
