ಸಿಟೀಸ್ 2.0 ಯೋಜನೆಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಆರಂಭದಲ್ಲಿ 135 ಕೋಟಿ ಮೊತ್ತದ ಯೋಜನೆಯಾಗಿ ಪ್ರಸ್ತಾಪವಾಗಿದ್ದ ಈ ಯೋಜನೆ, ನಗರ ಮೂಲಸೌಕರ್ಯ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ ಹಾಗೂ ಹವಾಮಾನ ಸ್ಥೈರ್ಯಕ್ಕಾಗಿ ಪ್ರಮುಖವಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳು ಹಾಗೂ ಮಹಾನಗರ ಪಾಲಿಕೆ ಸಭೆಯಲ್ಲಿ ನೀಡಲಾದ ಹೇಳಿಕೆಗಳು ಯೋಜನೆ ಅನುಷ್ಠಾನ ಕುರಿತು ಗಂಭೀರ ಪ್ರಶ್ನೆಗಳು ಎಬ್ಬಿಸಿವೆ ಎಂದು ರಾಜಕುಮಾರ ಟೋಪಣ್ಣವರ ಪ್ರಶ್ನಿಸಿದ್ದಾರೆ.

ಪಾಲಿಕೆ ತನ್ನ 20% ಪಾಲಿನ ಹಣ ನೀಡಲು ಸಿದ್ಧವಿದೆ ಎಂದು ಹೇಳಿದೆ. ಆದರೆ ಯೋಜನೆಗೆ ಅಗತ್ಯವಿದ್ದ ಸಮಯದಲ್ಲಿ ಈ ಸಿದ್ಧತೆ ಏಕೆ ಇರಲಿಲ್ಲ ? ರಾಜ್ಯ ಸರ್ಕಾರ ಅಥವಾ ಸ್ಮಾರ್ಟ್ ಸಿಟಿ ಅಧಿಕಾರಿಗಳ ಮೇಲೆ ಹೊಣೆ ಹಾಕುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ವಿಳಂಬ ಅಥವಾ ಅಡಚಣೆಗಳಿದ್ದರೆ, ಸ್ಥಳೀಯ ನಾಯಕತ್ವ ಬೆಳಗಾವಿಯ ಹಿತಾಸಕ್ತಿಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿತ್ತು ಎಂದಿದ್ದಾರೆ.
135 ಕೋಟಿಯಿಂದ 75 ಕೋಟಿಗೆ ಯೋಜನೆ ಮೊತ್ತ ಇಳಿಕೆಯಾಗಿರುವುದು ಸುಮಾರು 60 ಕೋಟಿ ನಷ್ಟವಾಗಿದೆ ಎಂಬುದನ್ನು ಸೂಚಿಸುತ್ತದೆ. ಇದು ಯೋಜನೆ ರೂಪಣೆ ಹಾಗೂ ಅನುಷ್ಠಾನದಲ್ಲಿ ವೈಫಲ್ಯವಾಯಿತೇ ಎಂಬ ಪ್ರಶ್ನೆಯನ್ನು ಹುಟ್ಟಿಸಿದೆ.ಇದಲ್ಲದೆ, ಈ ಹಂತದಲ್ಲಿ ಕಾರ್ಯಾಗಾರ ನಡೆಸಿರುವುದು ಜನಪ್ರತಿನಿಧಿಗಳಿಗೆ ಮುಂಚಿತವಾಗಿ ಸಮರ್ಪಕ ಮಾಹಿತಿ ನೀಡಲಾಗಿದೆಯೇ ಎಂಬ ಅನುಮಾನವನ್ನೂ ಉಂಟುಮಾಡಿದೆ ಎಂದಿದ್ದಾರೆ.
ಈ ವಿಚಾರ ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧವಲ್ಲ. ಇದು ಪಾರದರ್ಶಕತೆ ಮತ್ತು ಜವಾಬ್ದಾರಿಯ ಪ್ರಶ್ನೆಯಾಗಿವೆ. ಯೋಜನೆ ವಿಳಂಬಕ್ಕೆ ಕಾರಣವೇನು?, 60 ಕೋಟಿ ನಷ್ಟಕ್ಕೆ ಯಾರು ಹೊಣೆ?
ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಮರುಸ್ಥಾಪಿಸಲು ಯಾವ ಕ್ರಮ ಕೈಗೊಳ್ಳಲಾಗುತ್ತದೆ? ಬೆಳಗಾವಿ ಇಂತಹ ಅವಕಾಶಗಳನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಟೋಪಣ್ಣವರ ಆಕ್ರೋಶ ವ್ಯಕ್ತಪಡಿಸಿದ್ದಾರೆ
