ಕುಂದಾನಗರಿ ಬೆಳಗಾವಿಯಲ್ಲಿ ಪುಡಿರೌಡಿಗಳ ಹಾವಳಿ ಮಿತಿ ಮೀರಿದ್ದು, ತಲ್ವಾರ್ ಹಿಡಿದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುತ್ತಿರುವ ಘಟನೆಗಳು ಹೆಚ್ಚಾಗಿವೆ. ಈ ಕಿಡಿಗೇಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಬೆಳಗಾವಿ ಪೊಲೀಸರು, ಅಕ್ರಮ ಶಸ್ತ್ರಾಸ್ತ್ರ ಹೊಂದಿರುವವರ ವಿರುದ್ಧ ರೌಡಿಶೀಟರ್ ತೆರೆದು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಬೆಳಗಾವಿ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಲ್ವಾರ್ ಹಿಡಿದು ಓಡಾಡುವ ಪುಡಿರೌಡಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನಸಾಮಾನ್ಯರಲ್ಲಿ ಭೀತಿ ಮೂಡಿಸಿದೆ. ಇತ್ತೀಚೆಗೆ ಕಣಬರಗಿ ನಿವಾಸಿ ಗಂಗಾರಾಮ್ ಕುಳ್ಳನ್ನವರ ಎಂಬಾತ ತಲ್ವಾರ್ ಹಿಡಿದು ಓಡಾಡುತ್ತಿದ್ದಾಗ ಮಾಳಮಾರುತಿ ಪೊಲೀಸರು ಆತನನ್ನು ವಶಕ್ಕೆ ಪಡೆದು ಶಸ್ತ್ರಾಸ್ತ್ರ ಜಪ್ತಿ ಮಾಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಕೇವಲ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೇ 7 ಪ್ರಕರಣಗಳು ದಾಖಲಾಗಿದ್ದು, ನಗರಾದ್ಯಂತ ಒಟ್ಟು 35 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ, “ಕಳೆದ ಬಾರಿ ನಡೆದ ಚೂರಿ ಇರಿತದಂತಹ ಘಟನೆಗಳನ್ನು ತಡೆಯಲು ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ರೌಡಿಶೀಟರ್ ಓಪನ್ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಪೊಲೀಸರ ಈ ಕಾರ್ಯಾಚರಣೆಯು ಇದೀಗ ಪುಡಿರೌಡಿಗಳಲ್ಲಿ ನಡುಕ ಹುಟ್ಟಿಸಿದೆ.
