ಒಳ ಮೀಸಲಾತಿ ಇಲ್ಲದೇ ಉದ್ಯೋಗ ನೇಮಕಾತಿ ಮಾಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಉದ್ಯೋಗಾಕಾಕ್ಷಿಗಳ ಪ್ರತಿಭಟನೆಗೆ ಮಣಿದು 56432 ಉದ್ಯೋಗಗಳನ್ನು ನೇಮಕಾತಿ ಮಾಡಲು “ಸಚಿವ ಸಂಪುಟ” ಕೈಗೊಂಡಿರುವ ನಿರ್ಣಯವನ್ನು ನಮ್ಮ ವಿರೋಧವಿಲ್ಲ. ಆದರೆ ಉದ್ಯೋಗ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಮಾಡಿದೆ ಉದ್ಯೋಗ ನೇಮಕಾತಿ ಮಾಡಲು ಮುಂದಾಗಿರುವುದನ್ನು ಖಂಡಿಸಿದ್ದಾರೆ.
ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ಒತ್ತಾಯಿಸಿ ಕಳೆದ 35 ವರ್ಷಗಳಿಂದ ಮಾದಿಗ ಮತ್ತು ಮಾದಿಗ ಸಂಬಂಧಿತ ಸಮುದಾಯ ನಿರಂತರ ಹೋರಾಟ ಮಾಡಿದೆ. ಮೀಸಲಾತಿ ವರ್ಗೀಕರಿಸಲು ಸುಪ್ರೀಂ ಕೋರ್ಟ್ 7 ನ್ಯಾಯಾಧೀಶರ ಫೀಠ ತೀರ್ಪು ನೀಡಿ 2 ವರ್ಷ ಕಳೆದಿದೆ. ಮೀಸಲಾತಿ ವರ್ಗಿಕರಿಸಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ನೀಡಿದ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಸದಾಶಿವ ಮಾಂಗ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದು ಒಳ ಮೀಸಲಾತಿ ಜಾರಿಗೆ ಕೈಗೊಂಡ ಎಲ್ಲಾ ತೀರ್ಮಾಣಗಳನ್ನು ಬದಿಗೆ ಸರಿಸಿ ಒಳಮೀಸಲಾತಿ ಇಲ್ಲದೆ 1995 ರ ಹಳೆ ನಿಯಮದಂತೆ ಉದ್ಯೋಗ ನೇಮಕಾತಿ ಮಾಡಲು ಮುಂದಾಗಿರುವುದನ್ನು ಮನವಿಯಲ್ಲಿ ವಿರೋಧಿಸುತ್ತೇವೆ. ಸಿಎಂ ಸಿದ್ಧರಾಮಯ್ಯ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚಿಸಿದ್ದಾರೆ. ಮಾರ್ಚ್ 27ರ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಈ ಕುರಿತು ಯೋಗ್ಯ ನಿರ್ಣಯ ಕೈಗೊಳ್ಳದಿದ್ದರೇ, ಸಿದ್ಧರಾಮಯ್ಯನವರ ಕುರ್ಚಿಯನ್ನು ಅಲುಗಾಡಿಸುತ್ತೇವೆಂದು ಪ್ರತಿಭಟನಾಕಾರ ರಮೇಶ್ ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಸಂಘರ್ಷ ಸಮಿತಿಯ ಸದಸ್ಯರು ಭಾಗಿಯಾಗಿದ್ದರು.
