BELAGAVI

ಕನ್ನಡ ಶಾಲೆಗಳ ಉಳಿವಿಗೆ ಅನುದಾನದ ಆಸರೆ ನೀಡಿ:

Share

ಕಳೆದ ಮೂರು ದಶಕಗಳಿಂದ ವೇತನವಿಲ್ಲದೆ ಕನ್ನಡ ಕಾಯಕದಲ್ಲಿ ತೊಡಗಿರುವ ಅನುದಾನ ರಹಿತ ಶಾಲೆಗಳ ಶಿಕ್ಷಕರ ಬದುಕು ಈಗ ಬೀದಿಗೆ ಬಂದಿದೆ. 1995 ರಿಂದ 2001ರ ವರೆಗೆ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲೆಗಳನ್ನು ಕೂಡಲೇ ಅನುದಾನಕ್ಕೆ ಒಳಪಡಿಸುವಂತೆ ಶಿಕ್ಷಣ ಸಂಸ್ಥೆಗಳ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದೆ.

ರಾಜ್ಯದ ಅನುದಾನ ರಹಿತ ಶಾಲಾ-ಕಾಲೇಜುಗಳ ನೌಕರರು ಮತ್ತು ಆಡಳಿತ ಮಂಡಳಿಗಳ ಒಕ್ಕೂಟದ ಬೆಳಗಾವಿ ಘಟಕವು ಇಂದು ಬೆಳಗಾವಿಯಲ್ಲಿ ಪ್ರತಿಭಟನಾ ರ್ಯಾಲಿಯನ್ನು ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಕನ್ನಡ ಶಾಲೆಗಳ ಅಸ್ತಿತ್ವ ಉಳಿಸುವಂತೆ ಮನವಿ ಮಾಡಿದೆ. 1995ರ ನಂತರ ಪ್ರಾರಂಭವಾದ ಸುಮಾರು 133 ಪ್ರಾಥಮಿಕ, 383 ಪ್ರೌಢಶಾಲೆ ಹಾಗೂ 135 ಪದವಿಪೂರ್ವ ಕಾಲೇಜುಗಳು ಕಳೆದ 30 ವರ್ಷಗಳಿಂದ ಅನುದಾನವಿಲ್ಲದೆ ಸೊರಗುತ್ತಿವೆ. ಆಡಳಿತ ಮಂಡಳಿಗಳು ಆರ್ಥಿಕ ನಷ್ಟದಿಂದ ಶಾಲೆಗಳನ್ನು ಮುಚ್ಚುತ್ತಿದ್ದು, ನೂರಾರು ಶಿಕ್ಷಕರು ವೇತನವಿಲ್ಲದೆ ಕೂಲಿ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

1995ರ ನಂತರ ಆರಂಭಗೊಂಡ ಶಾಲಾ ಕಾಲೇಜುಗಳಿಗೆ ಅನುದಾನ ನೀಡಬೇಕೆಂದು ಆಗ್ರಹಿಸಿ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಕಳೆದ ಮೂವತ್ತು ವರ್ಷಗಳಿಂದ ನಿರಂತರ ಹೋರಾಟ ನಡೆಸಿದರೂ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಸರ್ಕಾರ 1 ರೂಪಾಯಿಯೂ ಅನುದಾನವನ್ನು ನೀಡದಿರುವುದು ಖೇದಕರ. ಹಗಲು ರಾತ್ರಿ ಸಮಾಜಕ್ಕಾಗಿ ದುಡಿಯುವ ಶಿಕ್ಷಕರ ಬದುಕು ದುಸ್ತರವಾಗಿದ್ದು, ಸಿಎಂ ಸಿದ್ಧರಾಮಯ್ಯ ಅವರು ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ನೀಡಿಲ್ಲ. ಮಕ್ಕಳ ಮತ್ತು ಶಿಕ್ಷಣದ ಭವಿಷ್ಯಕ್ಕಾಗಿ ಅನುದಾನಕ್ಕೊಳಪಡಿಸಬೇಕೆಂದು ಎಸ್ ಎಸ್. ಮಠದ ಆಗ್ರಹಿಸಿದರು.

ಅನುದಾನರಹಿತ ಶಾಲಾ ಕಾಲೇಜುಗಳಿಗೆ ಅನುದಾನ ಸಿಗಲಿದೆ ಎಂದು ಆತುರತೆಯಿಂದ ಬಜೆಟಿನ ಪ್ರತೀಕ್ಷೆಯಲ್ಲಿದ್ದೇವು. ಕಳೆದ ಅಧಿವೇಶನದಲ್ಲಿಯೂ ಪ್ರತಿಭಟನೆಯ ವೇಳೆ ಅನುದಾನ ನೀಡುವ ಭರವಸೆ ನೀಡಿದ್ದರು. ಆದರೇ, ಕೊನೆಗೂ ಶಿಕ್ಷಕರಿಗೆ ನಿರಾಸೆಯೇ ಉಂಟಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುದಾನ ರಹಿತ ಶಾಲೆಗಳೇ ಸಾಧನೆಯನ್ನು ಮಾಡುತ್ತಿವೆ. 351 ಕೋಟಿ ಅನುದಾನ ಸರ್ಕಾರಕ್ಕೆ ಹೆಚ್ಚಿನದ್ದೇನಲ್ಲ. ಇದನ್ನು ಬಿಡುಗಡೆಗೊಳಿಸಿ ಶಿಕ್ಷಕರ ಮೇಲೆ ದಯೆ ತೋರಿಸಬೇಕೆಂದು ಪ್ರತಿಭಟನಾಕಾರ ಸಲೀಮ್ ಕಿತ್ತೂರ್ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಪಿ.ಪಿ ಬೆಳಗಾಂವಕರ, ಎಂ.ಎ. ಕೋರಿಶೆಟ್ಟಿ, ಅನೀಲ ಯಾದವ್, ಸಂತೋಷ ಕುರಬೇಟ, ಮಾರುತಿ ಆಝಾಣಿ, ಪಿ.ಎಸ್. ಮಠದ, ಸುರೇಶ್ ಕಾಂಬಳೆ, ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!