ಗೋಕಾಕ ಉಪಕಾರಾಗೃಹದಲ್ಲಿ ಭದ್ರತಾ ಲೋಪ ಎದ್ದು ಕಂಡಿದೆ. ಚಿಕ್ಕೋಡಿ ನ್ಯಾಯಾಲಯದ ಆದೇಶದಂತೆ ಜೈಲು ಸೇರಿದ್ದ ಖೈದಿಯೊಬ್ಬ ಗೋಡೆ ಏರಿ ಪರಾರಿಯಾಗಿದ್ದನು. ಆದರೆ, ಅದೃಷ್ಟವಶಾತ್ ಸಾರ್ವಜನಿಕರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗದ ಆರೋಪಿ ಈಗ ಮತ್ತೆ ಕಂಬಿ ಎಣಿಸುವಂತಾಗಿದೆ.
ಚಿಕ್ಕೋಡಿ ತಾಲ್ಲೂಕಿನ ಉಮರಾಣಿ ಗ್ರಾಮದ ರಾಘವೇಂದ್ರ ಅಲಿಯಾಸ್ ರಘು ಶಿವಗೌಡ ಕರೆಣ್ಣವರ ಎಂಬ ವಿಚಾರಣಾಧೀನ ಖೈದಿ ಗೋಕಾಕ ಉಪಕಾರಾಗೃಹದಿಂದ ಪರಾರಿಯಾಗಿದ್ದನು. ಚಿಕ್ಕೋಡಿ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 84/2026 ರ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಈತನನ್ನು ಮಾರ್ಚ್ 22 ರಂದು ಗೋಕಾಕ ಜೈಲಿಗೆ ದಾಖಲಿಸಲಾಗಿತ್ತು. ಆದರೆ, ಜೈಲು ಸೇರಿದ ಕೆಲವೇ ಗಂಟೆಗಳಲ್ಲಿ ಆರೋಪಿಯು ಮಹಿಳಾ ಬ್ಯಾರೆಕ್ಸ್ ಮುಂಭಾಗದ ಕಾಂಪೌಂಡ್ ಪಕ್ಕದಲ್ಲಿದ್ದ ಎಕ್ಕದ ಮರವನ್ನೇರಿ, ಬಳಿಕ ಮರದ ಕಟ್ಟಿಗೆಯ ಸಹಾಯದಿಂದ ಹಿಂಬದಿಯ ಕಾಂಪೌಂಡ್ ಗೋಡೆ ಜಿಗಿದು ಎಲ್ಇಟಿ ಕಾಲೇಜು ರಸ್ತೆಯ ಮೂಲಕ ಪರಾರಿಯಾಗಿದ್ದನು.
ಜೈಲಿನಿಂದ ತಪ್ಪಿಸಿಕೊಂಡು ಯರಗಟ್ಟಿಗೆ ತಲುಪಿದ್ದ ಆರೋಪಿಯ ಬಗ್ಗೆ ಅಲ್ಲಿನ ಸ್ಥಳೀಯರಿಗೆ ಸಂಶಯ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಾರ್ವಜನಿಕರು ಯರಗಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಸಾರ್ವಜನಿಕರ ಜಂಟಿ ಕಾರ್ಯಾಚರಣೆಯ ಫಲವಾಗಿ ಪರಾರಿಯಾಗಿದ್ದ ರಾಘವೇಂದ್ರನನ್ನು ವಶಕ್ಕೆ ಪಡೆದು ಮತ್ತೆ ಜೈಲಿಗೆ ಒಪ್ಪಿಸಲಾಗಿದೆ. ಈ ಭದ್ರತಾ ಲೋಪದ ಕುರಿತು ಗೋಕಾಕ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಜೈಲಿನ ಭದ್ರತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ.
