“ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ಹರಿಹಾಯ್ದಿದ್ದಾರೆ. ಚಿಕ್ಕೋಡಿಯಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ರಾಜ್ಯದಲ್ಲಿನ ಅಭಿವೃದ್ಧಿ ಕುಂಠಿತ ಹಾಗೂ ಭ್ರಷ್ಟಾಚಾರದ ಕುರಿತು ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬೆಲೆ ಏರಿಕೆ ಸರ್ಕಾರದ 6ನೇ ಗ್ಯಾರಂಟಿ ಎಂದಿದ್ದಾರೆ.

ಚಿಕ್ಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಯಶಸ್ಸಿನ ಬಗ್ಗೆ ಮಾತನಾಡುವ ಸಿಎಂ ಅವರಿಗೆ ರಾಜ್ಯದ ಜನರ ಶಾಪ ತಟ್ಟುತ್ತಿದೆ. ಪೆಟ್ರೋಲ್, ಡೀಸೆಲ್, ವಿದ್ಯುತ್ ಹಾಗೂ ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸುವ ಮೂಲಕ ಬೆಲೆ ಏರಿಕೆಯನ್ನೇ 6ನೇ ಗ್ಯಾರಂಟಿಯನ್ನಾಗಿ ಜನರಿಗೆ ನೀಡಿದ್ದಾರೆ. ಬೆಲೆ ಏರಿಕೆ ಮಾಡದೆ ರಾಜ್ಯವನ್ನು ನಡೆಸಲು ಸಾಧ್ಯವಿಲ್ಲ ಎಂಬ ಹಂತಕ್ಕೆ ಸರ್ಕಾರ ತಲುಪಿದೆ” ಎಂದು ಲೇವಡಿ ಮಾಡಿದರು. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ ಎಂದು ಅವರು ದೂರಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತದ ಕುರಿತು ಮಾತನಾಡಿದ ವಿಜಯೇಂದ್ರ, ಸ್ವಂತ ಪಕ್ಷದ ಶಾಸಕರೇ ಸಿಎಂ ವಿರುದ್ಧ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಾಂಬ್ ಸಿಡಿಸಿದರು. ಅತೃಪ್ತ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಿ ಅವರ ಮನವೊಲಿಸುವ ಅನಿವಾರ್ಯತೆ ಸಿಎಂಗೆ ಎದುರಾಗಿದೆ. ಇನ್ನು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಕೆಪಿಸಿ ಅಕ್ರಮದ ವಿಚಾರವನ್ನು ಮುಂಬರುವ ಸದನದಲ್ಲಿ ಪ್ರಸ್ತಾಪಿಸಿ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲಾಗುವುದು ಎಂದು ಎಚ್ಚರಿಕೆ ನೀಡಿದರು.
