ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ನಡೆದಿದ್ದ ಫೋಟೋಗ್ರಾಫರ್ ಮಹೇಶ್ ಉಜನಿಮಠ ಕೊಲೆ ಪ್ರಕರಣಕ್ಕೆ ಈಗ ತಾರ್ಕಿಕ ಅಂತ್ಯ ಸಿಕ್ಕಿದೆ. ಕೇವಲ ಮನೆ ಮುಂದಿನ ರಸ್ತೆಯಲ್ಲಿ ಓಡಾಡುವ ವಿಚಾರಕ್ಕೆ ಶುರುವಾದ ಕ್ಷುಲ್ಲಕ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿತ್ತು. ಪ್ರಕರಣದ ಬೆನ್ನತ್ತಿದ್ದ ದೊಡ್ಡವಾಡ ಪೊಲೀಸರು ಈಗ ಹಂತಕ ರುದ್ರಯ್ಯನನ್ನ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.

ಕಿತ್ತೂರು ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ 33 ವರ್ಷದ ಫೋಟೋಗ್ರಾಫರ್ ಮಹೇಶ್ ಉಜನಿಮಠ ಅವರ ಬರ್ಬರ ಹತ್ಯೆಯಾಗಿತ್ತು. ಈ ಕೊಲೆ ಪ್ರಕರಣ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿತ್ತು. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಮಹೇಶ್, ತನ್ನದೇ ಸಂಬಂಧಿ ರುದ್ರಯ್ಯ ಉಜನಿಮಠ ಎಂಬಾತನ ಕ್ರೌರ್ಯಕ್ಕೆ ಬಲಿಯಾಗಿದ್ದರು.
ಅಸಲಿಗೆ ಈ ಕೊಲೆಗೆ ಕಾರಣವಾಗಿದ್ದು ಮಾತ್ರ ತೀರಾ ಕ್ಷುಲ್ಲಕ ವಿಚಾರ. ತನ್ನ ಮನೆ ಮುಂದಿನ ರಸ್ತೆಯಲ್ಲಿ ಮಹೇಶ್ ಓಡಾಡಬಾರದು ಎಂದು ಆರೋಪಿ ರುದ್ರಯ್ಯ ಪದೇ ಪದೇ ತಗಾದೆ ತೆಗೆಯುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜೋರು ಗಲಾಟೆ ನಡೆದಿತ್ತು. ಈ ವೇಳೆ ರೊಚ್ಚಿಗೆದ್ದ ರುದ್ರಯ್ಯ, ಮಾರಕಾಸ್ತ್ರಗಳಿಂದ ಮಹೇಶ್ ಅವರನ್ನ ಕೊಚ್ಚಿ ಕೊಲೆ ಮಾಡಿದ್ದನು.

ಘಟನೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ ಬೆಳಗಾವಿ ಎಸ್ಪಿ ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ದೊಡ್ಡವಾಡ ಪೊಲೀಸರು, ಹಂತಕ ರುದ್ರಯ್ಯನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ದೊಡ್ಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

