ಪೀರನವಾಡಿಯಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಗಾಯಗೊಂಡವರ ಪಾಲಿಗೆ ಮಾಜಿ ಮೇಯರ್ ವಿಜಯ ಮೋರೆ ಅವರು ದೇವದೂತರಾಗಿ ಬಂದಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದ ನಡುವೆಯೂ ಸಮಯಪ್ರಜ್ಞೆ ಮೆರೆದ ತಂಡ, ಗಾಯಾಳುಗಳ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ.

ಬೆಳಗಾವಿಯ ಪೀರನವಾಡಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ತೀವ್ರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಈ ವಿಷಯ ತಿಳಿದ ತಕ್ಷಣ ಮಾಜಿ ಮೇಯರ್ ವಿಜಯ ಮೋರೆ ಮತ್ತು ಅವರ ತಂಡ ಸ್ಥಳಕ್ಕೆ ಧಾವಿಸಿ, ಸಮಯ ವ್ಯರ್ಥ ಮಾಡದೆ ಗಾಯಾಳುಗಳನ್ನು ಉದ್ಯಮಬಾಗ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಜೀವ ಉಳಿಸುವ ತುರ್ತು ಸಂದರ್ಭದಲ್ಲೂ ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆಗಿಂತ ಹೆಚ್ಚಾಗಿ ದಾಖಲೆ ಮತ್ತು ಕಾಗದದ ಫಾರ್ಮಾಲಿಟಿಗಳಿಗೆ ಆದ್ಯತೆ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಆಸ್ಪತ್ರೆಯ ವಿಳಂಬ ಧೋರಣೆಯನ್ನು ಗಮನಿಸಿದ ವಿಜಯ ಮೋರೆ ಅವರು ಒಂದು ಕ್ಷಣವೂ ವಿಳಂಬ ಮಾಡದೆ, ತಮ್ಮದೇ ವಾಹನದಲ್ಲಿ ಗಾಯಾಳುಗಳನ್ನು ಬೆಳಗಾವಿಯ ಕೆ.ಐ.ಎಂ.ಎಸ್ (ಸಿವಿಲ್ ಆಸ್ಪತ್ರೆ) ಗೆ ಸ್ಥಳಾಂತರಿಸಿದರು. ಸಾಮಾಜಿಕ ಕಾರ್ಯಕರ್ತ ನೀಲೇಶ್ ಗಾವಡೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ ದಾಖಲಾದ ಗಾಯಾಳುಗಳಿಗೆ ವೈದ್ಯರು ತಕ್ಷಣವೇ ತುರ್ತು ಚಿಕಿತ್ಸೆ ಆರಂಭಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ನಿಯಮಗಳಿಗಿಂತ ಮಾನವೀಯತೆಯೇ ಮುಖ್ಯ ಎಂಬುದನ್ನು ಈ ಘಟನೆ ಸಾಬೀತುಪಡಿಸಿದ್ದು, ವಿಜಯ ಮೋರೆ ಅವರ ಶೀಘ್ರ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
