ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಪಡೆಯಲು ಜನರು ಪೆಟ್ರೋಲ್ ಪಂಪುಗಳ ಮುಂದೆ ಸುಡುವ ಬಿಸಿಲನ್ನೂ ಲೆಕ್ಕಿಸದೆ ಸಾಲುಗಟ್ಟಿ ನಿಂತಿದ್ದಾರೆ. ಪಟ್ಟಣದ ಹಳೆಯ ಮೆಹಬೂಬ್ ಪೆಟ್ರೋಲ್ ಪಂಪ್ ಸೇರಿದಂತೆ ಪ್ರಮುಖ ಬಂಕ್ಗಳಲ್ಲಿ ವಾಹನಗಳ ದಟ್ಟಣೆ ಮಿತಿಮೀರಿದ್ದು, ಇಂಧನ ಸಿಗುವುದಿಲ್ಲ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ.

ಬೈಲಹೊಂಗಲ ಪಟ್ಟಣದ ಪ್ರತಿಯೊಂದು ಪೆಟ್ರೋಲ್ ಪಂಪ್ಗಳು ಇಂದು ಜನರಿಂದ ಹಾಗೂ ವಾಹನಗಳಿಂದ ತುಂಬಿ ತುಳುಕುತ್ತಿವೆ. ಜನರು ಕೇವಲ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳುವುದಲ್ಲದೆ, ದೊಡ್ಡ ದೊಡ್ಡ ಬ್ಯಾರಲ್ಗಳು ಮತ್ತು 5 ರಿಂದ 10 ಲೀಟರ್ ಬಾಟಲ್ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸಂಗ್ರಹಿಸಲು ಮುಗಿಬಿದ್ದಿರುವುದು ಕಂಡುಬಂದಿದೆ. ಸರದಿ ಸಾಲಿನಲ್ಲಿ ನಿಲ್ಲುವ ವಿಚಾರವಾಗಿ ಗ್ರಾಹಕರ ನಡುವೆ ಮಾತಿನ ಚಕಮಕಿ ಹಾಗೂ ವಾಗ್ವಾದಗಳು ನಡೆಯುತ್ತಿದ್ದು, ಪರಿಸ್ಥಿತಿ ನಿಯಂತ್ರಿಸಲು ಪಂಪ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಈ ಏಕಾಏಕಿ ಜನಸಂದಣಿಗೆ ಮುಖ್ಯ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಗಾಳಿ ಸುದ್ದಿಗಳು. ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ಯೂಟ್ಯೂಬ್ಗಳಲ್ಲಿ ಇಂಧನ ಕೊರತೆಯ ಬಗ್ಗೆ ಹರಿದಾಡುತ್ತಿರುವ ವಿಡಿಯೋಗಳನ್ನು ಕಂಡು ಜನರು ಆತಂಕಕ್ಕೊಳಗಾಗಿದ್ದಾರೆ. ಸತ್ಯಾಸತ್ಯತೆ ತಿಳಿಯುವ ಮೊದಲೇ ಜನರು ಪಂಪುಗಳತ್ತ ಧಾವಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಜಿಲ್ಲಾಡಳಿತವು ಈ ಬಗ್ಗೆ ತಕ್ಷಣ ಸ್ಪಷ್ಟನೆ ನೀಡಿ, ವದಂತಿಗಳಿಗೆ ಕಿವಿಗೊಡದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
