Kagawad

ಯಡೂರದಿಂದ ಶ್ರೀಶೈಲಕ್ಕೆ ನಂದಿ ಸೇನೆ ರಥಯಾತ್ರೆ: ಜೋಡೆತ್ತಿನ ಕೃಷಿಕರ ಹಿತಕ್ಕಾಗಿ ಐತಿಹಾಸಿಕ ರಥಯಾತ್ರೆಗೆ ಕಾಗವಾಡದಲ್ಲಿ ಅದ್ದೂರಿ ಸ್ವಾಗತ

Share

ಮೊದಲಿನ ಹಿರಿಯ ರೈತರು ಜೋಡೆತ್ತಿನ ಕೃಷಿ ಚಟುವಟಿಕೆಗಳ ಮೇಲೆ ಅವಲಂಬಿತರಾಗಿದ್ದರು. ಅದರಿಂದ ಭೂಮಿ ಫಲವತ್ತಾಗಿ ಬೆಳೆಗಳು ಚೆನ್ನಾಗಿ ಬೆಳೆಯುತ್ತಿದ್ದವು, ಅಲ್ಲದೆ ಜನರು ಅನೇಕ ರೋಗಗಳಿಂದ ಮುಕ್ತರಾಗಿದ್ದರು. ಈಗ ಮತ್ತೆ ಅದೇ ಕಾಲ ಮುಂದೆ ಬರಲಿದೆ. ಪ್ರತಿಯೊಬ್ಬ ರೈತ ಎತ್ತುಗಳ ಸಾಕಾಣಿಕೆ ಮಾಡಲೇಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ನಂದಿ ಸೇನೆ ವತಿಯಿಂದ ಶ್ರೀ ಕ್ಷೇತ್ರ ಯಡೂರದಿಂದ ಶ್ರೀ ಕ್ಷೇತ್ರ ಶ್ರೀಶೈಲದವರೆಗೆ ನಂದಿ ಸೇನೆ ರಥಯಾತ್ರೆ ಕೈಗೊಳ್ಳಲಾಗಿದೆ ಎಂದು ಅಭಿಯಾನದ ಮುಖ್ಯಸ್ಥ ಸೋಮಲಿಂಗ ಬಿರಾದಾರ್ ಹೇಳಿದರು.

ಶುಕ್ರವಾರದಂದು ಶ್ರೀ ಕ್ಷೇತ್ರ ಯಡೂರದಿಂದ ಆಗಮಿಸಿದ ನಂದಿ ಸೇನೆ ರಥವನ್ನು ಕಾಗವಾಡ ಹಾಗೂ ಶೇಡಬಾಳ ಗ್ರಾಮದ ರೈತರು ಎತ್ತಿನ ಗಾಡಿಗಳೊಂದಿಗೆ ಸ್ವಾಗತಿಸಿದರು. ಅದರಲ್ಲಿ ‘ನಡೆದಾಡುವ ದೇವರು’ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಭಾವಚಿತ್ರವನ್ನಿಟ್ಟು ನಂದಿ ಯಾತ್ರೆಯ ಘೋಷಣೆ ಕೂಗುತ್ತಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಸಹೋದರರಾದ ಸೋಮಲಿಂಗ ಅಜ್ಜನವರ ನೇತೃತ್ವದಲ್ಲಿ ನಂದಿ ಯಾತ್ರೆ ಮುಂದೆ ಸಾಗುತ್ತಿದೆ.

ಬಸವರಾಜ್ ಬಿರಾದಾರ್ ಇವರ ನೇತೃತ್ವದಲ್ಲಿ ಶ್ರೀಶೈಲಕ್ಕೆ ತೆರಳುವ ಈ ಯಾತ್ರೆಯಲ್ಲಿ ರೈತರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಬಸವರಾಜ್ ಬಿರಾದಾರ್ ಅವರು ಮಾಹಿತಿ ನೀಡುತ್ತಾ: “ಜೋಡೆತ್ತಿನ ರೈತರು ನಿರ್ವಹಿಸುತ್ತಿರುವ ರಾಷ್ಟ್ರೀಯ ಜವಾಬ್ದಾರಿ ಕುರಿತು ಜನರಲ್ಲಿ ಅರಿವು ಮೂಡಿಸಿ ಕರ್ನಾಟಕ ರಾಜ್ಯದಲ್ಲಿರುವ 20 ಲಕ್ಷ ಜೋಡೆತ್ತಿನ ರೈತರನ್ನು ಒಗ್ಗೂಡಿಸುವುದು ಈ ಯಾತ್ರೆಯ ಉದ್ದೇಶ. ಜೋಡೆತ್ತಿನ ಕೃಷಿಕರನ್ನು ಬಸವ ತತ್ವದ ಮೂಲ ಬೇರುಗಳೆಂದು ಗುರುತಿಸಿ, ಬಸವ ತತ್ವ ಪುನರುತ್ಥಾನಕ್ಕಾಗಿ ಬಜೆಟ್‌ನಲ್ಲಿ ಶೇ. 10ರಷ್ಟು ಮೀಸಲಿಡುವ ಕಾನೂನು ಜಾರಿಗಾಗಿ ಹಾಗೂ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11,000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗಾಗಿ ರಾಜ್ಯದ ಬಹುಜನರ ಅಭಿಪ್ರಾಯ ಕ್ರೋಢೀಕರಿಸಲಾಗುತ್ತಿದೆ.”

ನಂದಿ ಸೇನೆ ರಥ ಯಾತ್ರೆ ಸಾಗುವ ಸಮಯದಲ್ಲಿ ಕನಿಷ್ಠ 11 ಸಾವಿರ ಜೋಡೆತ್ತಿನ ಬಂಡಿಗಳು 3 ರಿಂದ 11 ಕಿಲೋಮೀಟರ್ ವರೆಗೆ ನಂದಿ ಸೇನೆ ರಥದೊಂದಿಗೆ ಸಾಗಿ ಶ್ರೀಶೈಲ ಮಲ್ಲಯ್ಯನಿಗೆ ಭಕ್ತಿ ಸೇವೆ ಸಲ್ಲಿಸಲಿವೆ. ಇದು ಅತ್ಯಂತ ಐತಿಹಾಸಿಕ ನಂದಿ ಸೇನೆ ರಥಯಾತ್ರೆಯಾಗಿದೆ.

ಮಾರ್ಚ್ 15 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ 1008 ಗ್ರಾಮಗಳ ಜೋಡೆತ್ತಿನ ರೈತ ಪ್ರತಿನಿಧಿಗಳ ಐತಿಹಾಸಿಕ ಸಮಾವೇಶವು ಶ್ರೀಶೈಲ ಮಲ್ಲಯ್ಯನ ಸನ್ನಿಧಾನದಲ್ಲಿ ಜರುಗುವುದು ಎಂದು ಅವರು ಹೇಳಿದರು.

ರಥಯಾತ್ರೆಯಲ್ಲಿ ಕಾಗವಾಡ ಹಾಗೂ ಶೇಡಬಾಳ ಗ್ರಾಮಗಳ ರೈತ ಮುಖಂಡರಾದ ವಿವೇಕ್ ಬಿರಾದಾರ್, ಸಂಜು ಮಾಲಗಾಂವೆ, ಪ್ರವೀಣ್ ಚೌಗುಲೆ, ಅಶೋಕ್ ಚೌಗುಲೆ, ಸಂತೋಷ್ ಸಿಂಗ್, ರಣಜಿತ್ ಗಾಯಕವಾಡ್, ಒಬ್ಬಟ್ ಬೋರಗಾಂವೆ, ರಾವಸಾಬ ಕಮಾನೆ, ಬಂಡು ಬರವಾಡೆ, ಅನಿಲ್ ಪವಾರ್, ಶಾಂತಿನಾಥ್ ಕರವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:

error: Content is protected !!