ಜಿಲ್ಲೆಯಲ್ಲಿ ಇಂಧನ ಕೊರತೆಯಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದರೂ, ಖಾನಾಪುರ ತಾಲೂಕಿನ ಗ್ರಾಮೀಣ ಭಾಗದ ಚಿತ್ರಣವೇ ಬೇರೆಯಾಗಿದೆ. ನಂದಗಡ ಮತ್ತು ಬೇಕವಾಡದ ಪೆಟ್ರೋಲ್ ಬಂಕ್ಗಳಲ್ಲಿ ಕಳೆದ ಎರಡು ದಿನಗಳಿಂದ ಇಂಧನ ಖಾಲಿಯಾಗಿದ್ದು, ವಾಹನ ಸವಾರರು ಅಕ್ಷರಶಃ ಕಂಗಾಲಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿರುವ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಖಾನಾಪುರ ತಾಲೂಕಿನ ಪ್ರಮುಖ ಕೇಂದ್ರಗಳಾದ ನಂದಗಡ ಹಾಗೂ ಬೇಕವಾಡ ಭಾಗದ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖಾಲಿಯಾಗಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಜಿಲ್ಲೆಯಲ್ಲಿ ಇಂಧನ ಅಭಾವವಿಲ್ಲ ಎಂದು ಹೇಳಿಕೆ ನೀಡಿದ್ದರೂ, ಗ್ರಾಮೀಣ ಭಾಗದ ಬಂಕ್ಗಳಿಗೆ ಮಾತ್ರ ಪೂರೈಕೆಯಾಗುತ್ತಿಲ್ಲ. ನಂದಗಡದ ಬಂಕ್ ಮಾಲೀಕರು ನೀಡಿರುವ ಮಾಹಿತಿ ಪ್ರಕಾರ, ಮೂರು ದಿನಗಳ ಹಿಂದೆಯೇ ಇಂಧನಕ್ಕಾಗಿ ಹಣ ಪಾವತಿಸಿದರೂ ಸಂಬಂಧಪಟ್ಟ ತೈಲ ಕಂಪನಿಗಳ ಮೇಲಾಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದಾಗಿ ಪಂಪ್ ಮಾಲೀಕರು ಅಸಹಾಯಕರಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ.
ದೂರದ ಊರುಗಳಿಂದ ಬರುವ ವಾಹನ ಸವಾರರು ಬಂಕ್ಗಳ ಮುಂದೆ ಬಂದು ಇಂಧನವಿಲ್ಲದೆ ವಾಪಸ್ ಹೋಗುವ ಸ್ಥಿತಿ ನಿರ್ಮಾಣವಾಗಿದೆ. “ಸರ್ಕಾರ ಮತ್ತು ಜಿಲ್ಲಾಡಳಿತ ಎಲ್ಲವೂ ಸುಗಮವಾಗಿದೆ ಎಂದು ಹೇಳುತ್ತವೆ, ಆದರೆ ನಮಗೆ ಇಲ್ಲಿ ಹನಿ ಪೆಟ್ರೋಲ್ ಕೂಡ ಸಿಗುತ್ತಿಲ್ಲ” ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳ ಮತ್ತು ತೈಲ ಕಂಪನಿಗಳ ನಡುವಿನ ಸಮನ್ವಯದ ಕೊರತೆಯಿಂದ ಗ್ರಾಮೀಣ ಭಾಗದ ಜನರಿಗೆ ನರಕದರ್ಶನವಾಗುತ್ತಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಇಂಧನ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
