ಬೆಳಗಾವಿ ದಂಡುಮಂಡಳಿ ನಿರ್ಮಿಸಿರುವ ಹೂವಿನ ಮಾರುಕಟ್ಟೆಯ ಮಳಿಗೆಗಳ ವಿಚಾರ ಈಗ ರಾಜಕೀಯ ಮತ್ತು ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ. ಇಂದು ನಡೆದ ದಂಡುಮಂಡಳಿ ಸಭೆಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಅವರು ಮಾರುಕಟ್ಟೆ ನಿರ್ಮಾಣದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದಕ್ಕೆ ಅಧಿಕಾರಿಗಳು ಕಾನೂನು ಬದ್ಧತೆಯ ಉತ್ತರ ನೀಡಿದ್ದಾರೆ.


ದಂಡುಮಂಡಳಿ ಆವರಣದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಹಾಗೂ ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರು ಹೂವಿನ ಮಾರುಕಟ್ಟೆ ನಿರ್ಮಾಣದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದರು. ದಂಡುಮಂಡಳಿಯಿಂದ ನಿರ್ಮಾಣವಾಗಿರುವ ಈ ಮಾರುಕಟ್ಟೆಯ ಮಳಿಗೆಗಳು ನಿಯಮ ಬಾಹಿರವಾಗಿವೆ ಮತ್ತು ಕಾನೂನಿಗೆ ವಿರುದ್ಧವಾಗಿವೆ ಎಂದು ಕಿಡಿಕಾರಿದ ಶೆಟ್ಟರ್, ಇವುಗಳನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಒತ್ತಾಯಿಸಿದರು.
ಸಂಸದರ ಆಕ್ಷೇಪಕ್ಕೆ ಪ್ರತಿಯಾಗಿ ಸ್ಪಷ್ಟನೆ ನೀಡಿದ ದಂಡುಮಂಡಳಿ ಅಧಿಕಾರಿಗಳು, ಮಾರುಕಟ್ಟೆ ಮಳಿಗೆಗಳನ್ನು ಯಾವುದೇ ನಿಯಮ ಮೀರಿ ಕಟ್ಟಿಲ್ಲ ಎಂದು ಸಮರ್ಥಿಸಿಕೊಂಡರು. “ನಾವು ಸಂಪೂರ್ಣವಾಗಿ ಕಾನೂನು ಚೌಕಟ್ಟಿನಲ್ಲೇ ಮಾರುಕಟ್ಟೆಯನ್ನು ನಿರ್ಮಿಸಿದ್ದೇವೆ, ಹೀಗಾಗಿ ಮಳಿಗೆಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ” ಎಂದು ಅಧಿಕಾರಿಗಳು ಪಟ್ಟು ಹಿಡಿದರು. ಈ ಮಹತ್ವದ ಸಭೆಯಲ್ಲಿ ಬ್ರಿಗೇಡಿಯರ್, ದಂಡುಮಂಡಳಿ ಸಿಇಓ ಸೇರಿದಂತೆ ಪ್ರಮುಖ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದು, ಮಾರುಕಟ್ಟೆಯ ಕಾನೂನುಬದ್ಧತೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಸಭೆಯಲ್ಲಿ ಬ್ರಿಗೇಡಿಯರ್, ದಂಡುಮಂಡಳಿ ಸಿಇಓ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
