ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಸಾರ್ವಜನಿಕರಿಗೆ ಹಣದ ಆಮಿಷವೊಡ್ಡಿ ವಂಚಿಸುತ್ತಿದ್ದ ಅಂತರರಾಜ್ಯ ವಂಚಕರ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ದಂಧೆಯಲ್ಲಿ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಮಂದಿ ಬಂಧಿಸಲಾಗಿದೆ ಎಂದು ಎಸ್ಪಿ. ಕೆ. ರಾಮರಾಜನ್ ಹೇಳಿದರು.
ಗೋಕಾಕದ ಶ್ರೀನಗರದಲ್ಲಿರುವ ಮನೆಯೊಂದರಲ್ಲಿ ಹಣವನ್ನು ನಾಲ್ಕು ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಜಾಲದ ಮೇಲೆ ಗೋಕಾಕ ಶಹರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾದವರನ್ನು ಪರಶುರಾಮ ಭೀಮಶಿ ಬಡಕರಿ, ಇಮ್ರಾನ ಬಾಬಾಜಾನ ಜುನೇದಿ, ಜಯಶ್ರೀ ಬಾಬು ಕಾಂಬಳೆ, ಮನೀಷಾ ರಾಜು ಗಾಯಕವಾಡ (ಮಾರ್ಗೇರೆಟ್ ಡೆವಿಡ್ ಗಾಯಕವಾಡ), ಉಜ್ವಲಾ ತುಳಸಿರಾಮ ಬಿಲಾನೆ, ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಅನಂತ ಪ್ರಕಾಶ ನರವಾಡೆ ಹಾಗೂ ದಿಲದಾರ ರಬ್ಬಾನಿ ಶೇಖ ಎಂದು ಗುರುತಿಸಲಾಗಿದೆ. ವಂಚಕರು ಬಿಳಿ ಹಾಳೆಗಳಿಗೆ ಕಪ್ಪು ಬಣ್ಣ ಬಳಿದು, ಅದನ್ನು ಅಸಲಿ ನೋಟುಗಳೆಂದು ನಂಬಿಸಿ ಸಾರ್ವಜನಿಕರಿಂದ ಹಣ ದೋಚುತ್ತಿದ್ದರು.


ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ನೇತೃತ್ವದಲ್ಲಿ, ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ, ಡಿವೈಎಸ್ಪಿ ರವಿ ಡಿ. ನಾಯ್ಕಡಿ ಮತ್ತು ಸಿಪಿಐ ಸುರೇಶಬಾಬು ಆರ್.ಬಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಗೋಕಾಕ ಶಹರ ಠಾಣೆಯ ಪಿಎಸ್ಐ ಕಿರಣ ಮೋಹಿತೆ ಮತ್ತು ಅವರ ತಂಡವು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ನೋಟು ಪ್ರೆಸ್ ಮಾಡುವ ಮಷೀನ್, ನಗದು ಹಣ ಮತ್ತು ಮೊಬೈಲ್ಗಳನ್ನು ಜಪ್ತಿ ಮಾಡಿದೆ. ಪ್ರಕರಣದ ಕುರಿತು ಪಿಎಸ್ಐ ನಿಖಿಲ ಕಾಂಬಳೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಈ ಅಂತರರಾಜ್ಯ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪಿಗಳ ಮೇಲೆ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಾರ್ವಜನಿಕರ ಹಣ ದೋಚಲು ಪೊಲೀಸ್ ಉದ್ಯೋಗವನ್ನೇ ದುರುಪಯೋಗಪಡಿಸಿಕೊಂಡಿದ್ದ ಆರೋಪಿಗಳ ಕೃತ್ಯ ಇದೀಗ ಚರ್ಚೆಗೆ ಗ್ರಾಸವಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಎಸ್ಪಿ ಶ್ಲಾಘಿಸಿದ್ದಾರೆ.
