gokak

ಲೋಳಸೂರ ಸೇತುವೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಸಚಿವ ಸತೀಶ್‌ ಜಾರಕಿಹೊಳಿ

Share

ಗೋಕಾಕ ನಗರದ ಸಮೀಪದ ಲೋಳಸೂರ ಗ್ರಾಮದಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ 30.21 ಕೋಟಿ ರೂ. ವೆಚ್ಚದ ಲೋಳಸೂರ ಸೇತುವೆ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಪರಿಶೀಲಿಸಿದರು.

ನೂತನ ಸೇತುವೆ ನಿರ್ಮಾಣದಿಂದ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಮಳೆಗಾಲ, ಪ್ರವಾಹದಂತಹ ಸಂದರ್ಭಗಳಲ್ಲಿಯೂ ಸಹ ಅದನ್ನು ಎದುರಿಸಲಿಕ್ಕೆ ಇನ್ನು ಮುಂದೆ ಸರಳವಾಗಲಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಕಿರಿದಾದ ಸೇತುವೆ ಮತ್ತು 1964ರಲ್ಲಿ ನಿರ್ಮಾಣಗೊಂಡ ಪಕ್ಕದ ದೊಡ್ಡದಾದ ಸೇತುವೆಯ ಮಧ್ಯ ಹೊಸ ಸೇತುವೆಯು ತಲೆ ಎತ್ತಲಿದೆ. ಎರಡೂ ಸೇತುವೆಗಳಿಗೆ ಯಾವುದೇ ಹಾನಿಯಾಗದಂತೆ ಕಾಮಗಾರಿ ಕೈಕೊಳ್ಳಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.

ನಂತರ ಸಂಕೇಶ್ವರ–ಯರಗಟ್ಟಿ ರಾಜ್ಯ ಹೆದ್ದಾರಿಯ ಘಟಪ್ರಭಾ ಪಟ್ಟಣದ ಸಮೀಪ, ಘಟಪ್ರಭಾ ಕೆನಾಲ್ ಗೆ ಅಡ್ಡಲಾಗಿ ನಿರ್ಮಾಣಗೊಳ್ಳುತ್ತಿರುವ ನೂತನ ಸೇತುವೆ ಕಾಮಗಾರಿಯನ್ನು ಸಚಿವ ಸತೀಶ್‌ ಜಾರಕಿಹೊಳಿ ಅವರು ಪರಿಶೀಲಿಸಿ, ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕ ಸೇತುವೆ ಕಾಮಗಾರಿಯನ್ನು ಅಧಿಕಾರಿಗಳಿಗೆ ಶೀಘ್ರವೇ ಪೂರ್ಣಗೊಳಿಸಲು ಸೂಚಿಸಿದರು.

ಮೊರಾರ್ಜಿ ಶಾಲೆಗೆ ಭೇಟಿ ನೀಡಿದ ಸಚಿವರು: ಘಟಪ್ರಭಾದ ಮೊರಾರ್ಜಿ ಶಾಲೆಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಭೇಟಿ ನೀಡಿ ಶಾಲೆಯ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗಳನ್ನು ಪರಿಶೀಲಿಸಿದರು.

ಈ ವೇಳೆ ಶಾಲೆಯ ಮೂಲಸೌಕರ್ಯ, ವಸತಿ ವ್ಯವಸ್ಥೆ ಮತ್ತು ಶಿಕ್ಷಣದ ಗುಣಮಟ್ಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಅವರ ಅಭ್ಯಾಸ ಹಾಗೂ ಭವಿಷ್ಯದ ಕನಸುಗಳ ಬಗ್ಗೆ ವಿಚಾರಿಸಿದರು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸಚಿವರ ಆಪ್ತಸಹಾಯಕ ಶಿವು ಪಾಟೀಲ್‌, ರಾಜು ದರಗಶೆಟ್ಟಿ, ಆರಿಪ್‌ ಪಿರಜಾದೆ ಸೇರಿದಂತೆ ಹಲವರಿದ್ದರು.

Tags:

error: Content is protected !!