ಬೆಳಗಾವಿಯ ಹಿಂದವಾಡಿ ಭಾಗದಲ್ಲಿ ಇಂದು ಜೆಸಿಬಿ ಕಾರ್ಯಾಚರಣೆಯ ವೇಳೆ ಅನಿಲ ಪೈಪ್‌ಲೈನ್ ಸೋರಿಕೆಯಾಗಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಸ್ಥಳೀಯ ನಗರಸೇವಕರ ಸಮಯಪ್ರಜ್ಞೆಯಿಂದಾಗಿ ಸಂಭವನೀಯ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.
ಬೆಳಗಾವಿಯ ಹಿಂದವಾಡಿ ಜೈನ್ ಕಾಲೇಜ್ ಪಕ್ಕದಲ್ಲಿರುವ ವಸತಿ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಮನೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಮನೆಯ ಕಾಂಪೌಂಡ್ ಗೋಡೆ ಕಟ್ಟುವ ಉದ್ದೇಶದಿಂದ ಜೆಸಿಬಿ ಮೂಲಕ ಮಣ್ಣು ಅಗೆಯುವಾಗ, ಅಕಸ್ಮಾತ್ತಾಗಿ ಭೂಮಿಯ ಅಡಿಯಲ್ಲಿದ್ದ ಮೇಘಾ ಗ್ಯಾಸ್ ಕಂಪನಿಯ ಪೈಪ್‌ಲೈನ್‌ಗೆ ಪೆಟ್ಟು ಬಿದ್ದು ಅನಿಲ ಸೋರಿಕೆ ಆರಂಭವಾಯಿತು. ಅನಿಲದ ವಾಸನೆ ಹರಡುತ್ತಿದ್ದಂತೆ ಆತಂಕಗೊಂಡ ಸ್ಥಳೀಯ ನಿವಾಸಿಗಳು ಕೂಡಲೇ ಈ ಬಗ್ಗೆ ನಗರಸೇವಕರಾದ ನಿತೀನ್ ಜಾಧವ್ ಅವರಿಗೆ ಮಾಹಿತಿ ನೀಡಿದರು. ಘಟನೆಯ ಗಂಭೀರತೆಯನ್ನು ಅರಿತ ನಗರಸೇವಕ ನಿತಿನ್ ಜಾಧವ್ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ತಡಮಾಡದೆ ಮೇಘಾ ಗ್ಯಾಸ್ ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಿ ಘಟನಾ ಸ್ಥಳಕ್ಕೆ ಬರುವಂತೆ ಸೂಚಿಸಿದರು. ಅಧಿಕಾರಿಗಳು ಬರುವವರೆಗೂ ಸ್ಥಳದಲ್ಲೇ ಇದ್ದು ಮಾರ್ಗದರ್ಶನ ನೀಡಿದ ನಗರಸೇವಕರು, ಕಟ್ ಆಗಿದ್ದ ಲೈನ್ ಅನ್ನು ಬಂದ್ ಮಾಡಿಸಿ ದುರಸ್ತಿಗೊಳಿಸುವಂತೆ ಮಾಡಿದರು. ನಗರಸೇವಕರ ಈ ಕ್ಷಿಪ್ರ ಕ್ರಮ ಮತ್ತು ಜವಾಬ್ದಾರಿಯುತ ನಡೆಗೆ ಸ್ಥಳೀಯ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿ, ಧನ್ಯವಾದ ಅರ್ಪಿಸಿದ್ದಾರೆ.

