ಕರ್ನಾಟಕ ರಾಜ್ಯ ಮೀಸಲಾತಿ ಒಕ್ಕೂಟದಿಂದ ಮೀಸಲಾತಿ ರೋಷ್ಟರ್ ಪದ್ಧತಿಯನ್ನು ವಿರೋಧಿಸಿ ಮಾ.24 ರಂದು ಬೆಂಗಳೂರಿನ ಫ್ರೀಡಂ ಪಾಕ್೯ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಸಂಘಟನೆಯ ಮುಖಂಡ ರವಿ ಪೂಜಾರಿ ಹೇಳಿದರು.
ಶುಕ್ರವಾರ ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಅವರು ಮಾತನಾಡಿದರು. ಹಳೆಯ ಮೀಸಲಾತಿಯ ನಿಯಮ ಶೇ. 50% ಅನ್ವಯ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಣೆ ಮಾಡಿರುವುದು ಸ್ವಾಗತಾರ್ಹ, ತ್ವರಿತವಾಗಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.ಈ ಹಿಂದೆ ರಾಜ್ಯ ಸರಕಾರ ಪರಿಶಿಷ್ಟ ಜಾತಿ (174) ಮತ್ತು ಪರಿಶಿಷ್ಟ ಪಂಗಡಗಳ (70) ಮೀಸಲಾತಿ ಯನ್ನು ಹೆಚ್ಚಳ ಮಾಡಿರುವ ಆದೇಶ ವನ್ನು ಸಂವಿಧಾನದ 9ನೇ ಪೆಡ್ಯೂಲ್ ನಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಪ್ರಧಾನಿ ಗಳ ಬಳಿ ನಿಯೋಗ ಹೋಗಬೇಕು. ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದರು.
ದೇಶವ್ಯಾಪಿ ನಡೆಯುತ್ತಿರುವ ಜನಗಣತಿಯ ದತ್ತಾಂಶ ಬರುವವರೆಗೆ ಏಕಪಕ್ಷೀಯ ನಿರ್ಧಾರ ಮಾಡಬಾರದು. ರಾಜ್ಯದಲ್ಲಿ ಒಳ ಮೀಸಲಾತಿ ಹಂಚಿಕೆಯ ಪ್ರಕ್ರಿಯೆ ನಡೆಸುವ ಮುನ್ನ ನಮ್ಮ ಸಮುದಾಯಗಳ ಮುಖಂಡರ ಜೊತೆಗೆ ಸಮಾಲೋಚನೆ ಮಾಡಬೇಕು ಎಂದರು.
ಶಿಕ್ಷಣ ಪ್ರದೇಶ, ಹಾಸ್ಟೆಲ್ ಪ್ರದೇಶ ಮತ್ತು ಉದ್ಯೋಗ ನೇಮಕಾತಿ ರೊಸ್ಟರ್ ಹಂಚಿಕೆ ಮಾಡಿ ಸರ್ಕಾರ ಹೊರಡಿಸಿರುವ ಎಲ್ಲಾ ಆದೇಶ, ಸುತ್ತೋಲೆ ಗಳನ್ನು ವಿಂಪಡೆಯಬೇಕು. ಈಗಾಗಲೇ ಹೊರಡಿಸಿರುವ ವಿವಿಧ ನೇಮಕಾತಿ ಅಧಿಸೂಚನೆ ಗಳನ್ನು ರದ್ದುಗೊಳಿಸಬೇಕು. ಪರಿಶಿಷ್ಟ ಜಾತಿ ಪ್ರವರ್ಗ ಎ, ಬಿ, ಸಿ ಎಂದು ನಮೂದಿಸಿ ನೀಡಲಾಗಿರುವ ಜಾತಿ ಪ್ರಮಾಣಪತ್ರ ಗಳನ್ನು ಹಿಂಪಡೆಯಬೇಕು. ಹಳೆಯ ಜಾತಿ ಪ್ರಮಾಣ ಪತ್ರಗಳನ್ನೆ ಪರಿಗಣಿಸಬೇಕು ಎಂದರು.ಪರಿಶಿಷ್ಟರಿಗೆ ಮೀಸಲಾಗಿರುವ ಎಸ್ಟಿಪಿ, ಟಿಎಸ್ಪಿ ಅನುದಾನ ಡೈವರ್ಟ್ ತಡೆಗಟ್ಟಲು ಕಾನೂನು ತಿದ್ದುಪಡಿ ಮಾಡಬೇಕು ಹಾಗೂ ನ್ಯಾ. ನಾಗಮೋಹನ್ ದಾಸ್ ಆಯೋಗದ ಸಮೀಕ್ಷಾ ಸಮಗ್ರ ದತ್ತಾಂಶ, ಮಾಹಿತಿಗಳನ್ನು ತಾಲ್ಲೂಕುವಾರು ಬಿಡುಗಡೆ ಗೊಳಿಸಬೇಕು ಎಂದರು.
ಮಾಧ್ಯಮಗೋಷ್ಠಿಯಲ್ಲಿ ರಾಜೇಶ ಪವಾರ್, ಕೆ.ಎಸ್.ಮಮದಾಪುರೆ, ವಿಠ್ಠಲ್ ವಡ್ಡರ್, ಅವಿನಾಶ ಖಾನಾಪುರೆ, ರಾಜು ವಡ್ಡರ್ ಇನ್ನುಳಿದರು ಉಪಸ್ಥಿತರಿದ್ದರು.
