ನಿಮ್ಮ ಮೊಬೈಲ್ ಕಳೆದುಹೋಗಿದೆಯೇ? ಹಾಗಾದರೆ ಚಿಂತಿಸಬೇಡಿ. ಬೆಳಗಾವಿ ಜಿಲ್ಲಾ ಪೊಲೀಸರು ಹೈಟೆಕ್ ತಂತ್ರಜ್ಞಾನ ಬಳಸಿ ಕಳ್ಳತನವಾಗಿದ್ದ ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರೇ ಇಂದು ವಾರಸುದಾರರಿಗೆ ಮೊಬೈಲ್ ಹಸ್ತಾಂತರಿಸುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಕಳ್ಳತನವಾಗಿದ್ದ ಹಾಗೂ ಕಳೆದುಹೋಗಿದ್ದ 51 ಮೊಬೈಲ್‌ಗಳನ್ನು ಜಿಲ್ಲಾ ಸೈಬರ್ ಕ್ರೈಮ್ ಪೊಲೀಸರು ಯಶಸ್ವಿಯಾಗಿ ರಿಕವರಿ ಮಾಡಿದ್ದಾರೆ. ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು, ಕೀ-ಪ್ಯಾಡ್ ಫೋನ್‌ಗಳು ಸೇರಿದಂತೆ ಒಟ್ಟು 51 ಮೊಬೈಲ್‌ಗಳನ್ನು ಜಪ್ತು ಮಾಡಲಾಗಿದ್ದು, ಇವುಗಳನ್ನು ಇಂದು ಆಯಾ ಮಾಲೀಕರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಈವರೆಗೆ ದಾಖಲಾಗಿರುವ 4,744 ಮೊಬೈಲ್ ದೂರುಗಳ ಪೈಕಿ ಈಗಾಗಲೇ 1,051 ಮೊಬೈಲ್‌ಗಳನ್ನು ಪತ್ತೆಹಚ್ಚಿ ವಾಪಸ್ ನೀಡಲಾಗಿದೆ.
ಅಥಣಿ, ರಾಮದುರ್ಗ, ಬೈಲಹೊಂಗಲ ಭಾಗದ ಜಾತ್ರೆ ಹಾಗೂ ಬಸ್ ನಿಲ್ದಾಣಗಳಲ್ಲಿ ಮೊಬೈಲ್ ಕಳೆದುಕೊಂಡವರು ಕೇಂದ್ರ ಸರ್ಕಾರದ ‘ಸಿಇಐಆರ್’ (CEIR) ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದರು. ಈ ಮೊಬೈಲ್‌ಗಳಲ್ಲಿ ಹೊಸ ಸಿಮ್ ಹಾಕಿದ ತಕ್ಷಣ ಸೈಬರ್ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಕೂಡಲೇ ಆ ನಂಬರ್‌ಗಳಿಗೆ ಕರೆ ಮಾಡಿ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸಾರ್ವಜನಿಕರು ಮೊಬೈಲ್ ಕಳೆದುಕೊಂಡ ತಕ್ಷಣ ದೂರು ನೀಡುವ ಮೂಲಕ ಈ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಸ್‌ಪಿ ರಾಮರಾಜನ್ ಇದೇ ವೇಳೆ ಮನವಿ ಮಾಡಿದರು.
