BELAGAVI

ಮಾರಿಹಾಳ ಪೊಲೀಸರ ಭರ್ಜರಿ ಬೇಟೆ: ಅಂತರರಾಜ್ಯ ವಾಹನ ಕಳ್ಳರ ಗ್ಯಾಂಗ್ ಬಂಧನ, 95 ಲಕ್ಷ ರೂ. ಮೌಲ್ಯದ 21 ವಾಹನಗಳ ಜಪ್ತಿ!

Share

ಬೆಳಗಾವಿ ಪೊಲೀಸರು ಅಂತರರಾಜ್ಯ ಹಾಗೂ ಅಂತರ್ ಜಿಲ್ಲಾ ವಾಹನ ಕಳ್ಳರ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಟ್ರಕ್ ಕಳ್ಳತನ ಪ್ರಕರಣದ ಜಾಡು ಹಿಡಿದ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿ ಬರೋಬ್ಬರಿ 95 ಲಕ್ಷ ರೂಪಾಯಿ ಮೌಲ್ಯದ 21 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ನವೆಂಬರ್ 27ರಂದು ನೀಲಜಿ ಕ್ರಾಸ್ ಬಳಿ ನಿಲ್ಲಿಸಿದ್ದ ಅಶೋಕ ಲೇಲ್ಯಾಂಡ ಮಿನಿ ಗೂಡ್ಸ್ ಟ್ರಕ್ ಕಳ್ಳತನವಾಗಿದ್ದು, ಈ ಪ್ರಕರಣದ ತನಿಖೆಯನ್ನು ಮಾರಿಹಾಳ ಪೊಲೀಸರು ಕೈಗೆತ್ತಿಕೊಂಡಿದ್ದರು. ಆರೋಪಿಗಳ ಜಾಡು ಹಿಡಿದು ತನಿಖೆ ನಡೆಸಿದಾಗ, ಶಿವಮೊಗ್ಗ, ಭದ್ರಾವತಿ ಹಾಗೂ ಸಾಂಗ್ಲಿ ಮೂಲದ ಆರೋಪಿಗಳು ರಾಜ್ಯದ ವಿವಿಧೆಡೆ ಸುಲಭವಾಗಿ ಸಿಗುವ ಬೈಕ್ ಮತ್ತು ಸ್ಕೂಟರ್‌ಗಳನ್ನು ಕಳ್ಳತನ ಮಾಡಿ, ನಂತರ ಅವುಗಳನ್ನು ಬಳಸಿ ದೊಡ್ಡ ವಾಹನಗಳನ್ನು ಕದಿಯುವ ಕುಖ್ಯಾತ ಗ್ಯಾಂಗ್‌ ಎನ್ನುವುದು ಬೆಳಕಿಗೆ ಬಂದಿದೆ. ಆರೋಪಿಗಳು ಕದ್ದ ವಾಹನಗಳನ್ನು ಧಾರವಾಡ, ವಿಜಯಪುರ, ತಮಿಳುನಾಡು ಹಾಗೂ ದಾಂಡೇಲಿಯ ವಿವಿಧ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ದೃಢಪಟ್ಟಿದೆ.

ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 8 ಅಶೋಕ ಲೇಲ್ಯಾಂಡ ಟ್ರಕ್‌ಗಳು, 5 ರಾಯಲ್ ಎನ್‌ಫೀಲ್ಡ್ ಬೈಕ್‌ಗಳು, 5 ಸುಜುಕಿ ಆಕ್ಸೆಸ್ ಸ್ಕೂಟರ್‌ಗಳು ಸೇರಿದಂತೆ ಒಟ್ಟು 21 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ಗ್ರಾಮೀಣ ಎಸಿಪಿ ಗಂಗಾಧರ ಬಿ.ಎಂ. ಅವರ ಮಾರ್ಗದರ್ಶನದಲ್ಲಿ ಮಾರಿಹಾಳ ಪಿಐ ಐ.ಆರ್. ಪಟ್ಟಣಶೆಟ್ಟಿ ಮತ್ತು ತಂಡ ಈ ಕಾರ್ಯಾಚರಣೆಯನ್ನು ನಡೆಸಿದೆ. ವಾಹನಗಳ ಕಳ್ಳತನದ ಜಾಲವನ್ನು ಬುಡಸಮೇತ ಕಿತ್ತೊಗೆದ ಪೊಲೀಸ್ ತಂಡದ ಕಾರ್ಯವನ್ನು ಆಯುಕ್ತರು ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದಾರೆ.ಈ ಕುರಿತು ನಗರ ಪೊಲೀಸ ಆಯುಕ್ತರಾದ ಭೂಷಣ್ ಬೋರಸೆ ಅವರು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿಯನ್ನು ನೀಡಿದರು.

Tags:

error: Content is protected !!