BELAGAVI

ಬೆಳಗಾವಿ ಗಡಿಭಾಗದಲ್ಲಿ ‘ಮರಾಠಿ ಸನ್ಮಾನ ಯಾತ್ರೆ’: ಮರಾಠಿ ಅಸ್ಮಿತೆಯ ಮರುಸ್ಥಾಪನೆಗೆ ಕರೆ

Share

ಗಡಿಭಾಗದಲ್ಲಿ ಮರಾಠಿ ಅಸ್ಮಿತೆ ಮತ್ತು ಭಾಷಿಕ ಹಕ್ಕುಗಳ ರಕ್ಷಣೆಗಾಗಿ ‘ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ’ಯ ವತಿಯಿಂದ ರಾಜಹಂಸಗಡದಿಂದ ಯಳ್ಳೂರುವರೆಗೆ ಭವ್ಯ ‘ಮರಾಠಿ ಸನ್ಮಾನ ಯಾತ್ರೆ’ಯನ್ನು ಹಮ್ಮಿಕೊಳ್ಳಲಾಗಿತ್ತು. ಯಳ್ಳೂರಿನಲ್ಲಿ ನಡೆದ ಈ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮರಾಠಿ ಬಾಂಧವರು ಒಗ್ಗಟ್ಟಿನಿಂದ ಹೋರಾಡುವಂತೆ ಕರೆ ನೀಡಲಾಯಿತು.

ಸಮಾವೇಶದಲ್ಲಿ ಮಾತನಾಡಿದ ಉಪನ್ಯಾಸಕ ನಂದಕುಮಾರ್ ಗೋರುಲೆ ಅವರು, ಗಡಿ ಹೋರಾಟದ 70 ವರ್ಷಗಳ ಇತಿಹಾಸವನ್ನು ಸ್ಮರಿಸಿದರು. “ನ್ಯಾಯವು ಕೇಳಿದರೆ ಸಿಗದಿದ್ದರೆ, ಹೋರಾಟದ ಬಲದಿಂದ ಪಡೆಯಬೇಕಾಗುತ್ತದೆ. ಮರಾಠಿ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಮಾಜವು ಸದಾ ಸಿದ್ಧವಾಗಿರಬೇಕು. ಭಾಷೆಯನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ” ಎಂದು ಅವರು ಪ್ರತಿಪಾದಿಸಿದರು.

ಅಲ್ಲದೆ, ಛತ್ರಪತಿ ಶಿವಾಜಿ ಮಹಾರಾಜರು ದಕ್ಷಿಣ ಭಾರತದ ಸಂಸ್ಕೃತಿಯನ್ನು ರಕ್ಷಿಸಿದ್ದಾರೆ ಮತ್ತು ಐತಿಹಾಸಿಕವಾಗಿ ಈ ಗಡಿಭಾಗವು ಮಹಾರಾಷ್ಟ್ರದ್ದೇ ಭಾಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮಿತಿಯ ಶುಭಂ ಶೆಳಕೆ ಮಾತನಾಡಿ, “ನಾವು ಯಾವುದೇ ಭಾಷೆಯನ್ನು ದ್ವೇಷಿಸುವುದಿಲ್ಲ, ಆದರೆ ಮರಾಠಿ ಭಾಷೆಯ ಮೇಲೆ ನಡೆಯುವ ಅನ್ಯಾಯವನ್ನು ಸಹಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಾಧ್ಯಕ್ಷ ಮನೋಹರ್ ಕಿನೇಕರ್ ಅವರು, ಗಡಿಭಾಗದಲ್ಲಿ ಉದ್ದೇಶಪೂರ್ವಕವಾಗಿ ಕನ್ನಡೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ನ್ಯಾಯಾಲಯದ ಆದೇಶಗಳನ್ನು ಪಾಲಿಸದಿದ್ದರೆ ಮರಾಠಿ ಸಮಾಜವು ಮತ್ತೆ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭೆಗೂ ಮುನ್ನ ಮನೋಹರ್ ಕಿಣೇಕರ್ ಮತ್ತು ನಂದಕುಮಾರ್ ಗೋರುಲೆ ಅವರು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಪೂಜೆ ಸಲ್ಲಿಸಿದರು. ಈ ಸಮಾರಂಭದಲ್ಲಿ ಪ್ರಕಾಶ್ ಮರಗಾಳೆ, ಖಾನಾಪುರ ಸಮಿತಿ ಅಧ್ಯಕ್ಷ ಗೋಪಾಲ್ ದೇಸಾಯಿ, ಅಬಾಸಾಹೇಬ್ ದಳವಿ, ಅಡ್ವೊಕೇಟ್ ಅಮರ್ ಯಳ್ಳೂರ್ಕರ್, ಮಾಲೋಜಿ ಅಷ್ಟೇಕರ್, ಅಡ್ವೊಕೇಟ್ ಸುಧೀರ್ ಚವ್ಹಾಣ್, ವಿಕಾಸ್ ಕಲ್ಗಟಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಇದಕ್ಕೂ ಮೊದಲೂ ಯಳ್ಳೂರು ಗಢ ಸೇರಿದಂತೆ ವಿವಿಧೆಡೆ ಬೃಹತ್ ರ್ಯಾಲಿಯನ್ನು ನಡೆಸಲಾಯಿತು.ಕಾರ್ಯಕ್ರಮವನ್ನು ದತ್ತಾ ಉಘಾಡೆ ಅವರು ನಿರೂಪಿಸಿದರೆ, ದುದ್ದಪ್ಪ ಬಾಗೇವಾಡಿ ಅವರು ವಂದನಾರ್ಪಣೆ ಸಲ್ಲಿಸಿದರು.

Tags:

error: Content is protected !!