BELAGAVI

ಎಂ.ಎಸ್.ಎಂ.ಇ. ನೋಂದಣಿ ಇದ್ದರೂ ದಂಡದ ಬರೆ: ಬೆಳಗಾವಿ ಮಹಾನಗರ ಪಾಲಿಕೆ ಕ್ರಮಕ್ಕೆ ವರ್ತಕರ ಆಕ್ರೋಶ!

Share

ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳ ಕ್ರಮಕ್ಕೆ ವ್ಯಾಪಾರಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಎಂ.ಎಸ್.ಎಂ.ಇ. ಅಡಿ ನೋಂದಣಿಯಾಗಿದ್ದರೂ, ಟ್ರೇಡ್ ಲೈಸೆನ್ಸ್ ಇಲ್ಲದ ನೆಪದಲ್ಲಿ ದಂಡ ವಿಧಿಸುತ್ತಿರುವ ಅಧಿಕಾರಿಗಳ ವಿರುದ್ಧ ವರ್ತಕರು ಆಕ್ರೋಶಗೊಂಡಿದ್ದು, ಟ್ರೇಡ್ ಲೈಸೆನ್ಸ್ ಮತ್ತು ಎಂ.ಎಸ್.ಎಂ.ಇ ನಿಯಮಗಳನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಬೆಳಗಾವಿ ನಗರದ ಸಣ್ಣ ಹಾಗೂ ಮಧ್ಯಮ ಗಾತ್ರದ ವರ್ತಕರು ಕೇಂದ್ರ ಸರ್ಕಾರದ ಎಂ.ಎಸ್.ಎಂ.ಇ. ಉದ್ಯಮ್ ನೋಂದಣಿ ಮಾಡಿಸಿಕೊಂಡಿದ್ದರೂ, ಮಹಾನಗರ ಪಾಲಿಕೆ ವಿಧಿಸುತ್ತಿರುವ ದಂಡದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ನಗರದಲ್ಲಿ ಟ್ರೇಡ್ ಲೈಸೆನ್ಸ್ ಹೊಂದಿಲ್ಲದ ಕಾರಣಕ್ಕೆ ಅಧಿಕಾರಿಗಳು ಏಕಾಏಕಿ ದಂಡ ವಿಧಿಸುತ್ತಿರುವುದು ವರ್ತಕರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ಮಹಾಪೌರ ಮಂಗೇಶ್ ಪವಾರ್ ಅವರಿಗೆ ವರ್ತಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ-1976ರ ಸೆಕ್ಷನ್ 353ರ ಅನ್ವಯ ಪಾಲಿಕೆ ಅಧಿಕಾರ ಹೊಂದಿದ್ದರೂ, ಸರ್ಕಾರದ ನಿಯಮಗಳ ಅರಿವಿಲ್ಲದೆ ದಂಡ ವಿಧಿಸುವುದು ಸೂಕ್ತವಲ್ಲ ಎಂದು ವರ್ತಕರು ವಾದಿಸಿದ್ದಾರೆ. ಉದ್ಯಮ್ ನೋಂದಣಿಯೇ ವ್ಯಾಪಾರಕ್ಕೆ ಸಾಕಾಗುತ್ತದೆ ಎಂಬ ನಂಬಿಕೆಯಲ್ಲಿದ್ದ ವರ್ತಕರಿಗೆ ದಂಡದ ನೋಟಿಸ್ ಜಾರಿಯಾಗಿರುವುದು ಆರ್ಥಿಕ ಸಂಕಷ್ಟಕ್ಕೆ ದೂಡಿದಂತಾಗಿದೆ. ದಂಡದ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿದೆ. ಅಲ್ಲದೆ, ಟ್ರೇಡ್ ಲೈಸೆನ್ಸ್ ಪಡೆಯಲು ಸರಳ ಪ್ರಕ್ರಿಯೆ ಮತ್ತು ಆನ್‌ಲೈನ್ ಪಾವತಿ ಸೌಲಭ್ಯ ಕಲ್ಪಿಸಬೇಕು. ಟ್ರೇಡ್ ಲೈಸೆನ್ಸ್ ಮತ್ತು ಎಂ.ಎಸ್.ಎಂ.ಇ ನಿಯಮಗಳನ್ನು ಸ್ಪಷ್ಟಪಡಿಸಬೇಕೆಂದು ಮನವಿ ಮಾಡಿದ್ದು, ಸಣ್ಣ ವ್ಯಾಪಾರಿಗಳ ಹಿತರಕ್ಷಣೆಗೆ ಮಹಾನಗರ ಪಾಲಿಕೆ ಮುಂದಾಗಬೇಕೆಂದು ವರ್ತಕರ ಸಂಘದ ಅಧ್ಯಕ್ಷ ಸತೀಶ್ ತೆಂಡೂಲ್ಕರ್ ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖೇಶ್ ಖೋಡಾ, ಮುಖೇಶ್ ಸಂಘವಿ, ರಾಜು ಪಲಿವಾಲಾ, ಲಾಲ್’ಚಂದಜೀ ಛಪ್ರು, ನಿತೇಶ್ ಜೈನ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!