ಬೆಳಗಾವಿಯಲ್ಲಿ ಇಂದು ಭಗವಾನ್ ಮಹಾವೀರರ ಜನ್ಮಕಲ್ಯಾಣಕ ಮಹೋತ್ಸವವು ಅತ್ಯಂತ ಉತ್ಸಾಹದಲ್ಲಿ ನೆರವೇರಿತು. ನಗರದಲ್ಲಿ ಸಂಚರಿಸಿದ ಭವ್ಯ ಶೋಭಾಯಾತ್ರೆಯೂ ಜೈನ್ ಧರ್ಮದ ಸಂದೇಶದೊಂದಿಗೆ ಸಾಮಾಜೀಕ ಜಾಗೃತಿಯನ್ನು ಮೂಡಿಸಿದ್ದು, ವಿಶೇಷವಾಗಿತ್ತು.

ಇಂದು ಬೆಳಗಾವಿಯಲ್ಲಿ ಜೈನ್ ಧರ್ಮೀಯರಿಂದ ಭಗವಾನ್ ಮಹಾವೀರರ ಜನ್ಮಕಲ್ಯಾಣಕ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ನಗರದ ಟಿಳಕ ಚೌಕ್’ನಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಮಹಾಪೌರ ಪ್ರೀತಿ ಕಾಮಕರ, ಉಪಮಹಾಪೌರ ಹಣುಮಂತ ಕೊಂಗಾಲಿ, ದಕ್ಷಿಣ ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಸಂಜಯ್ ಪಾಟೀಲ್, ನರೇಂದ್ರ ಜೈನ್, ರಾಜೇಂದ್ರ ಜೈನ್, ಶಿವನಗೌಡ ಪಾಟೀಲ್, ಸುನೀಲ್ ಹಣುಮಣ್ಣನವರ ಸೇರಿದಂತೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಬೃಹತ್ ಶೋಭಾಯಾತ್ರೆಗೆ ಜೈನ್ ಧ್ವಜಾರೋಹನದ ಮೂಲಕ ಚಾಲನೆಯನ್ನು ನೀಡಲಾಯಿತು.

ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಕಳೆದ 28 ವರ್ಷಗಳಿಂದ ನರೇಂದ್ರ ಜೈನ್ ಅವರ ಮಾರ್ಗದರ್ಶನದಲ್ಲಿ ಜೈನ್ ಸಮಾಜವು ಬೆಳಗಾವಿಯಲ್ಲಿ ಒಕ್ಕಟ್ಟಿನಿಂದ ಭಗವಾನ್ ಮಹಾವೀರರ ಜಯಂತಿಯನ್ನು ಆಚರಿಸಲಾಗುತ್ತಿದೆ. ಯುವಜನರ ಭಗವಾನ್ ಮಹಾವೀರರ ಜನ್ಮ ಕಲ್ಯಾಣಕ ಮಹೋತ್ಸವದಲ್ಲಿ ಅತ್ಯಂತ ಉತ್ಸಾಹದಿಂದ ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ಅವರು, ಜೈನ ಸಮಾಜವು ತನು-ಮನ-ಧನದಿಂದ ಸೃಮೃದ್ಧವಾದ ಸಮಾಜವಾಗಿದೆ. ಜಾತಿ, ಭಾಷಾ ಬೇಧಭಾವವನ್ನು ಬಿಟ್ಟು, ತಳಮಟ್ಟದ ವರ್ಗದ ವರೆಗೂ ಅರಿತು ಬೆರೆತು ಬಾಳುವ ಸಮಾಜ ಜೈನ ಸಮಾಜ. ಇತರರಿಗೆ ಒಳ್ಳೆಯದಾಗಬೇಕು. ಇತರರಿಗೆ ಹಿಂಸೆಯಾಗಬಾರದು. ಅಹಿಂಸೆಯೇ ಪರಮೋ ಧರ್ಮ ಎಂದು ಸಾರುವ ಧರ್ಮ ಇದಾಗಿದೆ. ಧನದ ಸದುಪಯೋಗವನ್ನು ಈ ಸಮಾಜದಿಂದ ಕಲಿಯಬೇಕೆಂದರು.

ಇನ್ನು ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವದ ರೂವಾರಿ ನರೇಂದ್ರ ಜೈನ್ ಅವರು ಭಗವಾನ್ ಮಹಾವೀರರ ತ್ಯಾಗ ಬಲಿದಾನದ ಸಂದೇಶವನ್ನು ನೀಡುತ್ತ, ಬೆಳಗಾವಿಯಲ್ಲಿ ಜನ್ಮ ಕಲ್ಯಾಣಕ ಮಹೋತ್ಸವದ ನಿಮಿತ್ಯ ನಡೆಯುತ್ತಿರುವ ಮೆರವಣಿಗೆಯನ್ನು ಯಶಸ್ವಿಗೊಳಿಸಲು ಶ್ರಮಿಸಬೇಕೆಂದರು.
ರ್ಯಾಲಿಯಲ್ಲಿ ಜೈನ ಧರ್ಮದ ಸಂದೇಶ ಸಾರುವ ರೂಪಕಗಳು, ಮಹಿಳೆಯರ ನೃತ್ಯ, ಮಕ್ಕಳ ನೃತ್ಯ, ಧರ್ಮಸ್ಥಳ ವಿವಾದಲ್ಲಿ ಸತ್ಯ ಧರ್ಮಕ್ಕೆ ಜಯವಾದ ರೂಪಕ ಇನ್ನುಳಿದ ಸುಮಾರು 100 ಕ್ಕೂ ಹೆಚ್ಚು ರೂಪಕಗಳು ಎಲ್ಲರ ಗಮನ ಸೆಳೆದವು.

ರ್ಯಾಲಿ ಟಿಳಕಚೌಕ್’ನಿಂದ ಆರಂಭಗೊಂಡು, ರಾಮಲಿಂಗಖಿಂಡ್ ಗಲ್ಲಿ, ಕುಲಕರ್ಣಿ ಗಲ್ಲಿ, ಮಠ ಗಲ್ಲಿ, ಕಪಿಲೇಶ್ವರ ಮೇಲ್ಸೇತುವೆ, ಡಾ. ಶ್ಯಾಮಾ ಪ್ರಸಾದ ಮುಖರ್ಜಿ ರಸ್ತೆ,, ಶಹಾಪೂರ್ ಖಡೇ ಬಝಾರ್ ಮಾರ್ಗವಾಗಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ, ಮಹಾವೀರ ಭವನಕ್ಕೆ ತಲುಪಿ ಕೊನೆಗೊಂಡಿತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜೈನ್ ಬಾಂಧವರು ಭಾಗಿಯಾಗಿದ್ಧರು.
