ಬೆಳಗಾವಿಯ ಮುತಗಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಬಡಾವಣೆಗಳು ಇಂದು ಮೂಲಭೂತ ಸೌಕರ್ಯಗಳಿಗಾಗಿ ಹಾತೊರೆಯುತ್ತಿವೆ. ಕುಡಿಯುವ ನೀರು ಮತ್ತು ಕಸ ವಿಲೇವಾರಿ ಸಮಸ್ಯೆ ಬಗೆಹರಿಸದ ಪಂಚಾಯತ್ ವಿರುದ್ಧ ಸದಸ್ಯರೇ ರಸ್ತೆಗಿಳಿದು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಮುತಗಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀರಾಮ ನಗರ, ಸಾಯಿ ನಗರ, ಗೋಕುಲ ನಗರ, ವಿನಾಯಕ ನಗರ ಮತ್ತು ಬಸವ ನಗರಗಳ ನಾಗರಿಕರು ಕಳೆದ ಹಲವು ದಿನಗಳಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಕುರಿತು ಮಾತನಾಡಿದ ಗ್ರಾ.ಪಂ ಸದಸ್ಯ ರವಿ ಕೊಟಬಾಗಿ, ಪದೇ ಪದೆ ವಿನಂತಿಸಿದರೂ ಪಂಚಾಯತ್ ಆಡಳಿತ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಜಲಜೀವನ್ ಮಿಷನ್ ಯೋಜನೆಯಡಿ ಕಳೆದ ಒಂದು ತಿಂಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಕಸ ವಿಲೇವಾರಿ ವಾಹನಗಳೂ ಬಾರದ ಕಾರಣ ಬಡಾವಣೆಗಳು ಗಬ್ಬೆದ್ದು ನಾರುತ್ತಿವೆ. ಈ ನಿರ್ಲಕ್ಷ್ಯ ಮುಂದುವರಿದರೆ ಗ್ರಾಮಸ್ಥರೊಂದಿಗೆ ಸೇರಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸದಸ್ಯ ರವಿ ಕೊಟಬಾಗಿ ನೇತೃತ್ವದ ನಿಯೋಗವು, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪಿ.ಬಿ. ದುಡಗುಂಡಿ ಅವರಿಗೆ ಮನವಿ ಸಲ್ಲಿಸಿತು. ಸಮಸ್ಯೆಗಳ ಬಗ್ಗೆ ಅರಿತ ಅಧಿಕಾರಿಗಳು ಕೂಡಲೇ ಸ್ಥಳೀಯ ಪಿಡಿಓ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಕರೆಸಿಕೊಂಡು ತರಾಟೆಗೆ ತೆಗೆದುಕೊಂಡರು. ಒಂದು ವಾರದೊಳಗೆ ನೀರಿನ ಸಮಸ್ಯೆ ಮತ್ತು ಕಸ ವಿಲೇವಾರಿ ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಭರವಸೆ ಈಡೇರುತ್ತದೆಯೇ ಅಥವಾ ಮತ್ತೆ ಹೋರಾಟದ ಹಾದಿ ಹಿಡಿಯಬೇಕೆ ಎಂಬುದು ಕಾದು ನೋಡಬೇಕಿದೆ.
