ಸ್ಮಾರ್ಟ್ ಸಿಟಿ ಬೆಳಗಾವಿಯ ಸುಭಾಷ್ ನಗರದ ನಿವಾಸಿಗಳ ಪಾಲಿಗೆ ಎಲ್ ಅಂಡ್ ಟಿ ಕಂಪನಿ ಈಗ ಶಾಪವಾಗಿ ಪರಿಣಮಿಸಿದೆ. ಒಳಚರಂಡಿ ಕಾಮಗಾರಿ ಹೆಸರಲ್ಲಿ ರಸ್ತೆ ಅಗೆದು ಕೈತೊಳೆದುಕೊಂಡಿರುವ ಕಂಪನಿಯ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಅತ್ತ ಕುಡಿಯುವ ನೀರಿಲ್ಲ, ಇತ್ತ ಓಡಾಡಲು ರಸ್ತೆಯೂ ಇಲ್ಲ ಎನ್ನುವಂತಾಗಿರುವ ಇಲ್ಲಿನ ಪರಿಸ್ಥಿತಿಯ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಬೆಳಗಾವಿ: ನಗರದ ಮಹಾನಗರ ಪಾಲಿಕೆಯ ಹಿಂಭಾಗದಲ್ಲಿರುವ ಸುಭಾಷ್ ನಗರದಲ್ಲಿ ಎಲ್ ಅಂಡ್ ಟಿ (L&T) ಕಂಪನಿಯ ಕಾಮಗಾರಿ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಎಂಟು ದಿನಗಳಿಂದ ಒಳಚರಂಡಿ ಪೈಪ್ ಅಳವಡಿಸಲು ರಸ್ತೆಯನ್ನು ಅಗೆದಿರುವ ಕಂಪನಿ, ಕಾಮಗಾರಿಯನ್ನು ಪೂರ್ಣಗೊಳಿಸದೆ ಹಾಗೆಯೇ ಬಿಟ್ಟು ಹೋಗಿದೆ. ಅಗೆಯುವ ಭರದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕೂಡ ಒಡೆದು ಹೋಗಿದ್ದು, ಕಳೆದ ಒಂದು ವಾರದಿಂದ ಇಡೀ ಬಡಾವಣೆಗೆ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ಬೇಸಿಗೆಯ ಆರಂಭದಲ್ಲೇ ಹನಿ ನೀರಿಗೂ ಪರದಾಡುವಂತಾಗಿರುವುದು ಜನರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ. ಇನ್ನು ರಸ್ತೆಯ ಮಧ್ಯದಲ್ಲೇ ಬೃಹತ್ ಗುಂಡಿಗಳನ್ನು ಅಗೆದಿರುವುದರಿಂದ ವೃದ್ಧರು, ಮಹಿಳೆಯರು ಹಾಗೂ ಶಾಲಾ ಮಕ್ಕಳು ಓಡಾಡಲು ಹರಸಾಹಸ ಪಡುತ್ತಿದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು ಆರಂಭವಾಗಿದ್ದು, ಗುಂಡಿಗಳಿಂದ ಕೂಡಿದ ಈ ರಸ್ತೆಯಲ್ಲಿ ಸಂಚರಿಸುವಾಗ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ? ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಸಂಬಂಧಪಟ್ಟ ಎಲ್ ಅಂಡ್ ಟಿ ಅಧಿಕಾರಿಗಳಿಗೆ ಹಾಗೂ ಪಾಲಿಕೆ ಸಿಬ್ಬಂದಿಗೆ ಎಷ್ಟೇ ಕರೆ ಮಾಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ. ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಿ, ರಸ್ತೆಯನ್ನು ಮೊದಲಿನಂತೆ ಸುಸ್ಥಿತಿಗೆ ತರಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಸುಭಾಷ್ ನಗರದ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
