Bagalkot

ಲೋಕಾಪುರದಲ್ಲಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್: ಅದೃಷ್ಟವಶ ಓರ್ವ ಚಾಲಕ ಸೇರಿ 22 ಪ್ರಯಾಣಿಕರು ಪಾರು!

Share

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಚಾಲಕನ ನಿದ್ದೆಯ ಮಂಪರೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಸಕಾಲದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಲೋಕಾಪುರ ವ್ಯಾಪ್ತಿಯಲ್ಲಿ ಚಾಲಕನ ನಿದ್ದೆಯ ಮಂಪರಿನಿಂದಾಗಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬವು ಮುರಿದು ಬಸ್ಸಿನ ಮುಂಭಾಗದ ಶೀಶೆಯೊಳಗೆ ನುಗ್ಗಿದೆ. ಘಟನೆಯ ತೀವ್ರತೆಗೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಒಮ್ಮೆಲೇ ಬೆಚ್ಚಿಬಿದ್ದಿದ್ದು, ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಉಳಿದ 20 ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿದ್ದಾರೆ.

ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗುತ್ತಿದ್ದಂತೆಯೇ ವಿದ್ಯುತ್ ಸಂಪರ್ಕ ತಾನಾಗಿಯೇ ಕಡಿತಗೊಂಡಿದೆ (ಪವರ್ ಕಟ್). ಒಂದು ವೇಳೆ ವಿದ್ಯುತ್ ಪ್ರವಹಿಸುತ್ತಿದ್ದರೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ದೊಡ್ಡ ಮಟ್ಟದ ಅನಾಹುತ ಜರುಗುವ ಸಾಧ್ಯತೆಯಿತ್ತು. ಘಟನಾ ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಅಪಘಾತವು ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:

error: Content is protected !!