ಬೆಳಗಾವಿಯ ಖಾದರವಾಡಿ ಗ್ರಾಮದ ರಸ್ತೆ ಬದಿಯಲ್ಲಿ ಕಸ ಎಸೆದು ಅಸ್ವಚ್ಛತೆ ಮಾಡುತ್ತಿದ್ದ ರಿಕ್ಷಾ ಚಾಲಕನಿಗೆ ಗ್ರಾಮಸ್ಥರು ತಕ್ಕ ಶಾಸ್ತಿ ಮಾಡಿದ್ದಾರೆ. ಎಸೆದ ಕಸವನ್ನು ಮರಳಿ ಆತನ ರಿಕ್ಷಾಕ್ಕೇ ತುಂಬಿಸಿ ವಾಪಸ್ ಕಳುಹಿಸುವ ಮೂಲಕ, ಕಸ ಹಾಕುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.


ಬೆಳಗಾವಿ ನಗರದ ಸಮೀಪವಿರುವ ಖಾದರವಾಡಿ ಗ್ರಾಮದ ಗಾಯರಾಣ ಜಮೀನಿನಲ್ಲಿ ಕಸದ ಡಿಪೋ ನಿರ್ಮಾಣಕ್ಕೆ ಮೊದಲೇ ಗ್ರಾಮಸ್ಥರ ತೀವ್ರ ವಿರೋಧವಿದೆ. ಈ ಹೋರಾಟದ ನಡುವೆಯೇ, ಟಿಳಕವಾಡಿ ಹಾಗೂ ಸುತ್ತಮುತ್ತಲ ಪ್ರದೇಶದ ಜನರು ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲಿ ನಿರಂತರವಾಗಿ ಕಸ ಎಸೆಯುತ್ತಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿತ್ತು. ಇಂದು ಬೆಳಿಗ್ಗೆ ರಿಕ್ಷಾವೊಂದರಲ್ಲಿ ತಂದಿದ್ದ ಕಸವನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದ ಚಾಲಕನನ್ನು ಸಾಮಾಜಿಕ ಕಾರ್ಯಕರ್ತ ರಾಕೇಶ್ ಪಾಟೀಲ್ ಹಾಗೂ ಜಾಗೃತ ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಆತ ಎಸೆದಿದ್ದ ಕೊಳೆತ ಆಹಾರ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನೆಲ್ಲ ಮರಳಿ ಆತನ ಆಟೋ ರಿಕ್ಷಾಕ್ಕೇ ತುಂಬಿಸಿ ಅಲ್ಲಿಂದಲೇ ವಾಪಸ್ ಕಳುಹಿಸುವ ಮೂಲಕ ಅಪ್ಪಟ ದೇಶಿ ಶೈಲಿಯಲ್ಲಿ ಅದ್ದಲ್ ಪಾಠ ಕಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಕೇಶ್ ಪಾಟೀಲ್, ಹೊರಗಿನಿಂದ ಬಂದು ಗ್ರಾಮದ ಪರಿಸರವನ್ನು ಹಾಳುಮಾಡುವವರ ವಿರುದ್ಧ ಆಕ್ರೋಶ ಹೊರಹಾಕಿದರು. “ನಾವು ಈಗಾಗಲೇ ಕಸದ ಡಿಪೋ ವಿರುದ್ಧ ದೊಡ್ಡ ಸಂಘರ್ಷ ನಡೆಸುತ್ತಿದ್ದೇವೆ, ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು. ಇನ್ನು ಮುಂದೆ ಯಾರಾದರೂ ಕಸ ಎಸೆಯುತ್ತಾ ಸಿಕ್ಕಿಬಿದ್ದರೆ, ಅದನ್ನು ಅವರ ಮನೆಗೇ ತಂದು ಸುರಿಯಲಾಗುವುದು” ಎಂದು ಖಡಕ್ ಎಚ್ಚರಿಕೆ ನೀಡಿದರು. ಬೈಟ್
ಬೆಳಗಾವಿ ನಗರ ಹಾಗೂ ಸುತ್ತಮುತ್ತಲ ಜನರು ಖಾದರವಾಡಿ ಗ್ರಾಮದ ಹಾದಿಯಲ್ಲಿ ಕಸ ಎಸೆಯಬಾರದೆಂದು ಈ ಮೂಲಕ ಬಹಿರಂಗವಾಗಿ ವಿನಂತಿಸಿಕೊಳ್ಳಲಾಗಿದೆ. ಗ್ರಾಮಸ್ಥರ ಈ ದಿಟ್ಟ ಕ್ರಮವು ಈಗ ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
