• ಕಾಗವಾಡ ತಾಲ್ಲೂಕಿನ ಮೂಳೆ ಗ್ರಾಮದಲ್ಲಿ ಅಮಾನವೀಯತೆ
• ಹತ್ತು ವರ್ಷಗಳಿಂದ ಗೃಹಬಂಧನದಲ್ಲಿ ನಲುಗುತ್ತಿರುವ ಯುವತಿ
• ಮೂಢನಂಬಿಕೆಗೆ ಬಲಿಯಾದ ಬುದ್ಧಿಮಾಂದ್ಯ ಯುವತಿಯ ಭವಿಷ್ಯ
• ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾರುಣ ಕೃತ್ಯ
ಬಾನಾಮತಿ ಕಾಟ ಎಂದು ಮೂಢನಂಬಿಕೆಗೆ ಬೇದರಿ ಹೆತ್ತ ಮಗಳನ್ನೇ ಸರಪಳಿಯಿಂದ ಕಟ್ಟಿಹಾಕಿ ಅಮಾನವೀಯತೆ ಮೆರೆದ ಘಟನೆ ಕಾಗವಾಡ ತಾಲೂಕಿನ ಮೂಳೆ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬುದ್ದಿಮಾಂದ್ಯ ಯುವತಿಯನ್ನು ಹೆತ್ತವರೇ ಹಲವು ವರ್ಷ ಗಳಿಂದ ಸರಪಳಿಯಿಂದ ಕಟ್ಟಿಹಾಕಿ ಗೃಹ ಬಂಧನದಲ್ಲಿಟ್ಟಿದ್ದಾರೆ.
ಸಿದ್ರಾಯ ಎಂಬ ವ್ಯಕ್ತಿ ತನ್ನ ಮಗಳನ್ನು ಬಾನಾಮತಿ ಭಯದಿಂದ ಮನೆಯೊಳಗೆ ಸರಪಳಿ ಹಾಕಿ ಹಲವು ವರ್ಷ ಬಂಧನದಲ್ಲಿಟ್ಟಿದ್ದ ಎಂಬ ಆರೋಪ ಕೇಳಿಬಂದಿದೆ. ಕಳೆದ 10 ವರ್ಷಗಳ ಹಿಂದೆ ಎಲ್ಲರಂತೆ ಸಾಮಾನ್ಯವಾಗಿ ಕಾಲೇಜಿಗೆ ಹೋಗುತ್ತಿದ್ದ ಯುವತಿ ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುವ ಜತೆಗೆ ಅಸಹಜ ನೃತ್ಯ ಮಾಡುತ್ತಿದ್ದಳು. ಆಕೆಗೆ ಯಾರೋ ಬಾನಾಮತಿ ಮಾಡಿಸಿದ್ದಾರೆ ಎಂದು ಭಾವಿಸಿದ ಕುಟುಂಬಸ್ಥರು ಸ್ವಾಮೀಜಿ ಮೊರೆ ಹೋಗಿ ಅವರು, ಬಾನಾಮತಿ ನಿವಾರಣೆಗೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ ಎಂದು ತಿಳಿಸಿದ್ದರಿಂದ, ಚಿಕಿತ್ಸೆಗೂ ಮುಂದಾಗದೇ ಮಗಳನ್ನು ಮನೆಯಲ್ಲೇ ಗೃಹಬಂಧನದಲ್ಲಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸರಪಳಿ ತೆಗೆದರೆ ಜನರಿಗೆ ಕಲ್ಲು ಎಸೆಯುತ್ತಾಳೆ, ಓಡಿ ಹೋಗುತ್ತಾಳೆ” ಎಂಬ ಕಾರಣದಿಂದ ಹೀಗೆ ಕಟ್ಟಿಹಾಕಲಾಗಿದೆ ಎಂದು ತಿಳಿದು ಬಂದಿದೆ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
