ರಾಜ್ಯದ ಎಲ್ಲ ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ಬರುವ ಜೈನ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಸುಮಾರು ₹6.50 ಕೋಟಿ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸಲು ನಿವೇಶನ ಖರೀದಿಸುವ ಕುರಿತು ಕರ್ನಾಟಕ ಜೈನ ಅಸೋಸಿಯೇಷನ್ ಸದಸ್ಯರು ರಾಜ್ಯ ಮಠದ ಆಡಳಿತ ಮಂಡಳಿಗೆ ಸಂಪೂರ್ಣ ಅನುಮತಿ ನೀಡಿದ್ದಾರೆ ಎಂದು ಸಮಾಜದ ರಾಜ್ಯಾಧ್ಯಕ್ಷ ಜಿತೇಂದ್ರಕುಮಾರ್ ಎಸ್. ಅವರು ಉಗಾರದಲ್ಲಿ ತಿಳಿಸಿದರು.

ಮಂಗಳವಾರ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದ ಜೈನ ಸಮಾಜ ಸಂಘಟನೆಯ ಸಮುದಾಯ ಭವನದಲ್ಲಿ ಕರ್ನಾಟಕ ಜೈನ ಅಸೋಸಿಯೇಷನ್ ರಾಜ್ಯ ಮಠದ ವಿಶೇಷ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಹಾಸ್ಟೆಲ್ ನಿರ್ಮಾಣಕ್ಕಾಗಿ ನಿವೇಶನ ಖರೀದಿಸಲು ಸದಸ್ಯರು ಏಕಮತದಿಂದ ಕೈ ಎತ್ತಿ ಅನುಮೋದನೆ ನೀಡಿದರು.
ಕರ್ನಾಟಕ ಜೈನ ಅಸೋಸಿಯೇಷನ್ (ಕೆಜೆಎ) ಉಪಾಧ್ಯಕ್ಷರು ಹಾಗೂ ಉಗಾರದ ಶ್ರೀ ಪದ್ಮಾವತಿ ಮಂದಿರದ ಮುಖ್ಯಸ್ಥರಾದ ಶೀತಲಗೌಡ ಪಾಟೀಲ ಅವರು ಸಭೆಯನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇವರ ನೇತೃತ್ವದಲ್ಲಿಯೇ ಸಭೆ ಜರುಗಿತು.
ಅಧ್ಯಕ್ಷ ಜಿತೇಂದ್ರ ಕುಮಾರ್ ಎಸ್. ಅವರು ವಿವರವಾದ ಮಾಹಿತಿ ನೀಡಿ, “1918ರಿಂದ ಮೋತೀಖಾನೆ ತಿಮ್ಮಪ್ಪಯ್ಯ ಜೈನ ವಿದ್ಯಾರ್ಥಿನಿಲಯವು ಪೂಜ್ಯ ಭಟ್ಟಾರಕರು ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಕಾಲಕ್ರಮೇಣ ವಿಸ್ತರಣೆಗೊಂಡು, 2004ರಲ್ಲಿ ನವೀಕರಿಸಲಾದ 52 ಕೊಠಡಿಗಳ ವಿದ್ಯಾರ್ಥಿನಿಲಯದೊಂದಿಗೆ, 2013 ಮತ್ತು 2023ರಲ್ಲಿ ಎರಡು ಹೊಸ ಕಟ್ಟಡಗಳನ್ನು ಖರೀದಿಸಲಾಗಿದೆ. ಪ್ರಸ್ತುತ ಸುಮಾರು 250 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ,” ಎಂದರು.
ವಿದ್ಯಾರ್ಥಿಗಳಿಂದ ವಸತಿಗಾಗಿ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದ್ದು, ಈಗಿರುವ ಸೌಲಭ್ಯಗಳು ಸಾಕಾಗುತ್ತಿಲ್ಲ. ಪಾಕಶಾಲೆ ಹಾಗೂ ಭೋಜನ ವ್ಯವಸ್ಥೆಯೂ ಅಪರ್ಯಾಪ್ತವಾಗಿದ್ದು, ಯಾತ್ರಾರ್ಥಿಗಳ ವಾಸ್ತವ್ಯಕ್ಕೂ ಸ್ಥಳದ ಅಭಾವ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಹಾಸ್ಟೆಲ್ ಸಮೀಪದಲ್ಲಿರುವ ಸುಮಾರು 2560 ಚದರ ಅಡಿ ವಿಸ್ತೀರ್ಣದ ನಿವೇಶನದ ಮೇಲಿರುವ ಕಟ್ಟಡವನ್ನು ಖರೀದಿಸಿ, ಹೆಚ್ಚುವರಿ ವಸತಿ ಹಾಗೂ ಊಟೋಪಚಾರ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿದೆ.
ಈ ಯೋಜನೆಗೆ ಕಟ್ಟಡ ಖರೀದಿ, ದುರಸ್ತಿ, ಪೀಠೋಪಕರಣ ಹಾಗೂ ಇತರ ಮೂಲಭೂತ ವ್ಯವಸ್ಥೆಗಳಿಗಾಗಿ ಒಟ್ಟು ಸುಮಾರು ₹6.50 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈಗಿರುವ ಸಂಪನ್ಮೂಲಗಳನ್ನು ಬಳಸಿದ ನಂತರವೂ ಕನಿಷ್ಠ ₹4.00 ಕೋಟಿ ಹೆಚ್ಚುವರಿ ಧನಸಹಾಯದ ಅಗತ್ಯವಿದೆ. ಈ ಮಹತ್ವದ ಯೋಜನೆಯನ್ನು ಸಾಕಾರಗೊಳಿಸಲು ಕೆಜೆಎ ಸದಸ್ಯರು, ಮಠ-ಮಾನ್ಯಗಳು, ದಾನಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರ ಅತ್ಯಾವಶ್ಯಕವಾಗಿದೆ ಎಂದು ಅವರು ಮನವಿ ಮಾಡಿದರು.
ವಿಶೇಷ ಸಭೆಯಲ್ಲಿ ಕರ್ನಾಟಕ ಜೈನ ಅಸೋಸಿಯೇಷನ್ ಉಪಾಧ್ಯಕ್ಷ ರಾಜಕೀರ್ತಿ, ಶೀತಲಗೌಡಾ ಪಾಟೀಲ, ಸಹ ಕಾರ್ಯದರ್ಶಿ ಡಾ. ನೀರಜ ನಾಗೇಂದ್ರಕುಮಾರ, ಕೋಶಾಧಿಕಾರಿ ಮಹಾವೀರ, ಸಂಚಾಲಕರಾದ ಉತ್ತಮ್ ಪಾಟೀಲ್ (ಚಿಕ್ಕೋಡಿ), ಕೋಮಲ ಬ್ರಹ್ಮದೇವಯ್ಯ (ಬೆಂಗಳೂರು), ಜಂಬುಕುಮಾರ ಬಾಗೇವಾಡಿ (ವಿಜಯಪುರ), ಜಿನೇಂದ್ರ ಕುಮಾರ, ಜಿನೇಂದ್ರ ಎಂ.ಎಂ. (ಬೆಂಗಳೂರು), ದೀಪಕ್ ಪಂಡಿತ್ (ಕಲಬುರಗಿ), ದಲೀಪ್ ಕುಮಾರ (ಬೀದರ್), ಪುಷ್ಪಕ್ ಹನುಮಣ್ಣನವರ್ (ಬೆಳಗಾವಿ), ಬಾಹುಬಲಿ ಕಡಕೋಳ (ಬಾಗಲಕೋಟೆ), ಬಾಹುಬಲಿ ಪರಮಗೌಡರ್ (ರಾಯಭಾಗ), ವಜ್ರಕುಮಾರ್ ಎಸ್.ಎ. (ಹಾವೇರಿ) ಮತ್ತು ಅಥಣಿ ತಾಲೂಕಿನ ಅರುಣ ಎಲಗುದರಿ, ಎ.ಸಿ.ಪಾಟೀಲ್, ರಾಜು ನಾಡಗೌಡಾ, ದುಳಗೌಡಾ ಪಾಟೀಲ್, ಅಮರ ದುರ್ಗನವರ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದು ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
