ತಮ್ಮ ಸಂಚಾರದ ಮೇಲೆ ಸರ್ಕಾರ ವಿಧಿಸಿದ್ದ ನಿರ್ಬಂಧದ ವಿರುದ್ಧ ಕನ್ಹೇರಿಯ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿಯವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೌಡಿಗಳು ರಾಜಾರೋಷವಾಗಿ ಓಡಾಡುವ ಈ ಕಾಲದಲ್ಲಿ, ಸ್ವಾಮೀಜಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ ಎಂದು ಅವರು ಗುಡುಗಿದ್ದಾರೆ.
ರಬಕವಿ-ಬನಹಟ್ಟಿಯಲ್ಲಿ ಭವ್ಯ ಸ್ವಾಗತ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದರು. “ಜೈಲಿನಲ್ಲಿ ಇರಬೇಕಾದ ರೌಡಿ ಶೀಟರ್ಗಳು ರಸ್ತೆಗಳಲ್ಲಿ ಮಜಾ ಮಾಡುತ್ತಾ ಓಡಾಡುತ್ತಿದ್ದಾರೆ. ಆದರೆ ಸ್ವಾಮೀಜಿಗಳಿಗೆ ಜಿಲ್ಲೆಗಳಿಂದ ಜಿಲ್ಲೆಗಳಿಗೆ ನಿರ್ಬಂಧ ವಿಧಿಸುವ ಕೆಟ್ಟ ಪರಂಪರೆಯನ್ನು ಈ ಸರ್ಕಾರ ಮಾಡುತ್ತಿದೆ. ಅಧಿಕಾರ ಮತ್ತು ಐಶ್ವರ್ಯ ಬಂದಾಗ ನಮ್ರತೆ ಇರಬೇಕು, ಸೊಕ್ಕು ಪ್ರದರ್ಶಿಸಿದರೆ ಜನರೇ ಅದನ್ನು ಮುರಿದು ಹಾಕುತ್ತಾರೆ” ಎಂದು ಸಚಿವ ಎಂ.ಬಿ. ಪಾಟೀಲ್ ಹೆಸರನ್ನು ಉಲ್ಲೇಖಿಸಿ ನೇರ ಎಚ್ಚರಿಕೆ ನೀಡಿದರು.

ಹೈಕೋರ್ಟ್ ತೀರ್ಪಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ ಸ್ವಾಮೀಜಿ, “ಧಾರವಾಡ ಹೈಕೋರ್ಟ್ ನೀಡಿದ ತೀರ್ಪಿನಿಂದ ಇನ್ನು ಮುಂದೆ ಇಂತಹ ಸಾಹಸಕ್ಕೆ ಯಾರೂ ಕೈ ಹಾಕಲಾರರು. ಸರ್ಕಾರದ ಕೈಗೊಂಬೆಯಾಗಿರುವ ಕೆಲವು ಸ್ವಾಮೀಜಿಗಳನ್ನು ಖುಷಿಪಡಿಸಲು ನನ್ನ ಕೈ-ಬಾಯಿ ಕಟ್ಟುವ ಪ್ರಯತ್ನ ನಡೆಯಿತು. ಆದರೆ ಭಕ್ತರು ನನ್ನ ಜೊತೆಗಿರುವಾಗ ಸರ್ಕಾರದ ನಿರ್ಬಂಧಗಳಿಗೆ ನಾನು ಜಗ್ಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಇಂದಿಗೂ ಕೆಲವರು ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
